ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಕೆಲವು ಅಧಿಕಾರಿಗಳು ಮಹಿಳಾ ಹಾಸ್ಟೆಲ್ ನಲ್ಲಿ ತಡರಾತ್ರಿ ಅಶ್ಲೀಲ ಸಾಹಿತ್ಯದ ಹಾಡಿಗೆ ಡಾನ್ಸ್ ಮಾಡಿ, ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಜಿಲ್ಲೆಯಲ್ಲಿ ಎಸ್ ಸಿ– ಎಸ್ ಟಿ ಹಾಸ್ಟೆಲ್ ಗಳು ಎಷ್ಟೊಂದು ಸುರಕ್ಷಿತ ಎನ್ನುವ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬಂದಿದೆ.
ತಡ ರಾತ್ರಿ ಹಾಸ್ಟೆಲ್ ಗಳಿಗೆ ಪ್ರವೇಶಿಸಿ ದೀಪಾವಳಿ ನೆಪದಲ್ಲಿ ಸ್ವತಃ ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಜವಾಬ್ದಾರಿಯುತ ಅಧಿಕಾರಿಗಳೇ ವಿದ್ಯಾರ್ಥಿನಿಯರ ಕೈ ಹಿಡಿದುಕೊಂಡು, ಡಾನ್ಸ್ ಮಾಡೋದು, ಅಧಿಕಾರಿಗಳನ್ನು ಹೆಣ್ಣು ಮಕ್ಕಳಿಂದ ಎತ್ತಿ ಹಿಡಿಸಿ ಕುಣಿಸುವಂತೆ ಮಾಡಿಸಿರುವುದು ಹೆಣ್ಣು ಹೆತ್ತವರನ್ನು ಆತಂಕಕ್ಕೆ ದೂಡಿದೆ.
ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀನಿವಾಸ ಕೆ., ತಹಶೀಲ್ದಾರ್ ಸಿದ್ದಪ್ಪ, ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ಜಿಲ್ಲೆಯ ಇತರ ಅಧಿಕಾರಿಗಳ ದುರ್ವರ್ತನೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಯನ್ನು ಜಿಲ್ಲೆಯ ಜನರು ನೆನಪಿಸಿಕೊಳ್ಳುವಂತೆ ಮಾಡಿದೆ.
ಇತ್ತೀಚೆಗೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೋರ್ವಳು ರಾತ್ರಿ 11 ಗಂಟೆಗೆ ಹಾಸ್ಟೆಲ್ ನ ಕಾಂಪೌಂಡ್ ಗೋಡೆ ಹಾರಿ, ಕಾರಿನಲ್ಲಿ ಹೋಗಿ ಬಳಿಕ ಬೆಳಗ್ಗಿನ ಜಾವ 5 ಗಂಟೆಗೆ ಹಾಸ್ಟೆಲ್ ಗೆ ಮರಳಿದ ಘಟನೆ ಮಾಸುವ ಮುನ್ನವೇ, ಇದೀಗ ಮತ್ತೊಂದು ಹಾಸ್ಟೆಲ್ ನಲ್ಲಿ, ಇಡೀ ಜಿಲ್ಲೆಯ ಜವಾಬ್ದಾರಿಯನ್ನು ಹೊತ್ತಿರುವ ಒಬ್ಬ ಜವಾಬ್ದಾರಿಯುತ ಜಿಲ್ಲಾಧಿಕಾರಿಗಳು ತಡ ರಾತ್ರಿ ತಮ್ಮ ಪಟಾಲಂ ಜೊತೆಗೆ ಎಸ್ ಸಿ—ಎಸ್ ಟಿ ಮಹಿಳಾ ಹಾಸ್ಟೆಲ್ ಗೆ ತೆರಳಿ ಕಾರ್ಯಕ್ರಮದ ನೆಪದಲ್ಲಿ ಅಸಭ್ಯ, ಅಶ್ಲೀಲ ಸಾಹಿತ್ಯದ ಹಾಡುಗಳಿಗೆ ಹೆಣ್ಣು ಮಕ್ಕಳಿಂದ ಡಾನ್ಸ್ ಮಾಡಿಸಿರೋದೇ ಅಲ್ಲದೇ , ಹೆಣ್ಣು ಮಕ್ಕಳ ಕೈ ಹಿಡಿದುಕೊಂಡು ಕುಣಿದು ಕುಪ್ಪಳಿಸಿರೋದು ಆತಂಕ ಸೃಷ್ಟಿಸಿದೆ. ಅಧಿಕಾರಿಗಳು ಎಸ್ ಸಿ—ಎಸ್ ಟಿ ಮಹಿಳಾ ಹಾಸ್ಟೆಲ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳಿಗೆ ಇದು ಕಾರಣವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ, ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ, ತಹಶೀಲ್ದಾರ್ ಸಿದ್ದೇಶ್, ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ಇತರ ಅಧಿಕಾರಿಗಳ ಈ ಕೃತ್ಯವನ್ನು ನೈಜ ಹೋರಾಟಗಾರರ ವೇದಿಕೆ, ಬೆಂಗಳೂರು ಕಟು ವಾಕ್ಯಗಳಿಂದ ಖಂಡಿಸಿದೆ, ಜಿಲ್ಲಾಧಿಕಾರಿಗಳಾಗಿ ಶ್ರೀನಿವಾಸ್ ಕೆ. ಅವರು ಸರ್ಕಾರದಲ್ಲಿರುವ ಸಾರ್ವಜನಿಕರ ತೆರಿಗೆ ಹಣದಿಂದ ಮಂಜೂರಾಗಿರುವ ಹಲವು ಸೌಲಭ್ಯಗಳಲ್ಲಿ ಶುದ್ಧ ಕುಡಿಯುವ ನೀರು, ಹಾಸಿಗೆ, ದಿಂಬು, ಊಟದ ವ್ಯವಸ್ಥೆಗಳನ್ನು ಪರಿಶೀಲಿಸಲು ಮತ್ತು ಕಿರಿಯ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಿದ್ದಾರೋ ಇಲ್ಲವೋ? ಎಂಬುದನ್ನು ವಿದ್ಯಾರ್ಥಿನಿಯರ ನಿಲಯಕ್ಕೆ ಸಂಜೆ 6 ಗಂಟೆಯ ಒಳಗೆ ಪರಿಶೀಲಿಸಬೇಕೆ ಹೊರತು, ತಡ ರಾತ್ರಿ ಸಮಯದಲ್ಲಿ ಹಾಸ್ಟೆಲಿಗೆ ಭೇಟಿ ನೀಡಿ, ಜವಾಬ್ದಾರಿಯನ್ನು ಮರೆತು ಸಿನಿಮಾ ಹಾಡುಗಳು ಹಾಕಿ ಕುಣಿದಿರುವುದು ನೋಡಿದರೆ ಇವರನ್ನು ಯಾರಿಗೆ ಹೋಲಿಸಬೇಕು ಎಂಬುದೇ ನಮಗೆ ಸಂಶಯವಾಗಿದೆ ಎಂದಿದೆ.
ಈ ಹಾಸ್ಟೆಲ್ ನಲ್ಲಿ ವಾಸಿಸುವ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ಬಡತನದಿಂದ ಬೆಂದು, ಅಸ್ಪೃಶ್ಯತೆಯಿಂದ ನೊಂದಿರುತ್ತಾರೆ. ನಮ್ಮ ಮಕ್ಕಳಾದರೂ ಒಳ್ಳೆಯ ವಿದ್ಯಾಭ್ಯಾಸ ಮಾಡಲಿ ಎಂದು ಸರ್ಕಾರವೇ ನಡೆಸುತ್ತಿರುವ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗದ ಹಾಸ್ಟೆಲ್ಲಿಗೆ ಸೇರಿಸಿರುತ್ತಾರೆ. ನಾವು ಅಧಿಕಾರಿಗಳು ಏನು ಮಾಡಿದರು ನಡೆಯುತ್ತದೆ ಆನೆ ನಡೆದಿದ್ದೇ ಹಾದಿಯೆಂಬ ಧೋರಣೆಯಿಂದ ಹೊರಗೆ ಬರಬೇಕಾಗಿದೆ, ಕರ್ನಾಟಕ ರಾಜ್ಯದಲ್ಲಿ ಅಥವಾ ದೇಶದಲ್ಲಿ ಯಾವುದೇ ವಿದ್ಯಾರ್ಥಿನಿಯರ ನಿಲಯಕ್ಕೆ ಸಂಜೆ ಆರು ಗಂಟೆಯ ನಂತರ ಮಹಿಳಾ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರು ಹೋಗುವುದಕ್ಕೆ ಅವಕಾಶವಿರುವುದಿಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ವಿದ್ಯಾರ್ಥಿನಿಯರ ನಿಲಯಕ್ಕೆ ತಡರಾತ್ರಿ ಹೋಗಿ ಡ್ಯಾನ್ಸ್ ಮಾಡಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ ಎಂದು ನೈಜ ಹೋರಾಟಗಾರರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಈ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಶ್ರೀಮಂತರು, ಬಲಾಢ್ಯರು, ಮೇಲ್ವರ್ಗದವರ ಕುಟುಂಬದಿಂದ ಬಂದವರಲ್ಲ ತುಳಿತಕ್ಕೊಳಗಾದ ಕುಟುಂಬದಿಂದ, ಅಸ್ಪೃಶ್ಯತೆಯಿಂದ ಬೆಂದಿರುವ ಕುಟುಂಬದಿಂದ ಬಂದಿರುವ ಅವರಿಗೆ ಇಷ್ಟವಿಲ್ಲದಿದ್ದರೂ ಸಹ ಜಿಲ್ಲಾಧಿಕಾರಿ, ತಹಶೀಲ್ದಾರ್ ಎಂಬ ಭಯದಿಂದ ಮತ್ತು ಪ್ರಶ್ನೆ ಮಾಡಿದರೆ ಎಲ್ಲಿ ನಮ್ಮನ್ನು ಹಾಸ್ಟೆಲ್ ನಿಂದ ಹೊರಗೆ ಕಳುಹಿಸುತ್ತಾರೆ ಎಂಬ ಕಾರಣದಿಂದ ಅವರೊಂದಿಗೆ ಡ್ಯಾನ್ಸ್ ಮಾಡಲು ಸಹಕರಿಸಿರುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಜಿಲ್ಲಾಧಿಕಾರಿಗಳು ಹುದ್ದೆಗೆ ತಕ್ಕಂತೆ ಘನತೆ ಮತ್ತು ಗಾಂಭೀರ್ಯತೆಯನ್ನು ಕಾಪಾಡುವಲ್ಲಿ, ವಿದ್ಯಾರ್ಥಿನಿಯರೊಂದಿಗೆ ಹೇಗೆ ವರ್ತಿಸಬೇಕೆಂಬ ಸಾಮಾನ್ಯ ಜ್ಞಾನವಿಲ್ಲದೆ ಮತ್ತು ಜಿಲ್ಲೆಯ ಅವರ ಕೈ ಕೆಳಗಿನ ಇತರ ಅಧಿಕಾರಿಗಳಿಗೂ ಹೆಣ್ಣು ಮಕ್ಕಳೊಂದಿಗೆ ಕುಣಿಯಲು ಪ್ರೋತ್ಸಾಹಿಸಿರುತ್ತಾರೆ ಎಂದು ಆರೋಪಿಸಿದೆ.
ಜಿಲ್ಲೆಯ ಅಧಿಕಾರಿಗಳು ಮತ್ತು ಇನ್ನಿತರ ನಾಗರಿಕರು ಜಿಲ್ಲಾಧಿಕಾರಿಗಳೇ ಈ ರೀತಿ ವರ್ತಿಸಿರುವುದರಿಂದ ಅವರನ್ನು ಹಿಂಬಾಲಿಸಿದರೆ ವಿದ್ಯಾರ್ಥಿನಿಯರ ಉನ್ನತ ಮಟ್ಟದ ವ್ಯಾಸಂಗಕ್ಕೂ, ವೈಯಕ್ತಿಕ ಜೀವನಕ್ಕೂ ಹಾನಿ ಆಗಬಹುದು. ಇಂತಹ ಅಶಿಸ್ತಿನ ಮತ್ತು ಬಹಿರಂಗವಾಗಿ ಹೆಣ್ಣು ಮಕ್ಕಳೊಂದಿಗೆ ವರ್ತಿಸಿದ ರೀತಿ, ಡ್ಯಾನ್ಸ್ ಮಾಡುವ ರೀತಿ ಗಮನಿಸಿದರೆ ಇವರು ಜಿಲ್ಲಾಧಿಕಾರಿಗಳಾಗಿ ಮುಂದುವರಿಯಲ್ಲೂ ಅರ್ಹತೆಯನ್ನೇ ಕಳೆದುಕೊಂಡಿರುತ್ತಾರೆ. ಆದುದರಿಂದ ತಕ್ಷಣ ಜಿಲ್ಲಾಧಿಕಾರಿಯದ ಶ್ರೀನಿವಾಸ್ ಕೆ, ತಹಶೀಲ್ದಾರ್ ಸಿದ್ದಪ್ಪ, ಜಂಟಿ ನಿರ್ದೇಶಕ ಕೃಷ್ಣಪ್ಪ ಅವರನ್ನು ಅಮಾನತ್ತಿನಲ್ಲಿಟ್ಟು ಇಲಾಖೆ ತನಿಖೆ ನಡೆಸಿ ಅವರ ಮೇಲೆ ಶಿಸ್ತು ಕ್ರಮಗಳನ್ನು ಜರುಗಿಸಬೇಕೆಂದು ನೈಜ ಹೋರಾಟಗಾರರ ವೇದಿಕೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಆಗ್ರಹಿಸಿದೆ.
ಮಾನ್ಯ ಜಿಲ್ಲಾಧಿಕಾರಿಗಳು, ಬಾಲಕಿಯರ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿ ನಡೆದುಕೊಂಡಿರುವ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಇದು ದುರಾದೃಷ್ಟಕರ ಮತ್ತು ಖಂಡನೀಯವಾಗಿದೆ. ತುಮಕೂರು ಜಿಲ್ಲೆಯಲ್ಲಿ ಮೂಲಭೂತ ಸಮಸ್ಯೆಗಳು ಸೇರಿದಂತೆ ಬಹಳಷ್ಟು ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ಮಹಿಳಾ ಹಾಸ್ಟೆಲ್ ಗಳಿಗೆ ರಾತ್ರಿ ವೇಳೆ ಹೋಗಿ ನೃತ್ಯ ಪ್ರದರ್ಶನ ಮಾಡುವ ಮನಸ್ಥಿತಿ ಒಳ್ಳೆಯದಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ವಿರುದ್ಧ ನೈಜ ಹೋರಾಟಗಾರರ ವೇದಿಕೆ ದೂರನ್ನು ದಾಖಲಿಸಿದೆ. ನಮ್ಮ ದೂರಿಗೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ನಡೆಯನ್ನು ನೋಡಿ ನಾವು ಮುಂದಿನ ಹೋರಾಟವನ್ನು ರೂಪುಗೊಳಿಸುತ್ತೇವೆ.
– ಕುಣಿಗಲ್ ನರಸಿಂಹಮೂರ್ತಿ, ನೈಜ ಹೋರಾಟಗಾರರ ವೇದಿಕೆ