ಬೆಳಗಾವಿ: ಮಹಾಯೋಗಿ ವೇಮನರು ಮಹಾಪುರುಷರು. ಅವರ ವಿಚಾರಧಾರೆಯನ್ನು ಅನುಸರಿಸುತ್ತಿರುವ ರೆಡ್ಡಿ ಸಮುದಾಯವು ಇಡೀ ಸಮಾಜದ ಒಳಿತಿನೊಂದಿಗೆ ತನ್ನ ಒಳಿತು ಕಂಡುಕೊಂಡಿದೆ” ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ ನಗರದ ರೆಡ್ಡಿ ಭವನದಲ್ಲಿ ಗುರುವಾರ (ಜ.19) ಏರ್ಪಡಿಸಲಾಗಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ರೆಡ್ಡಿ ಸಮುದಾಯವರು ಯಾರಿಗೂ ಕೆಟ್ಟದನ್ನು ಬಯಸಿದವರಲ್ಲ ಯಾರಿಗೂ ತೊಂದರೆಯನ್ನು ಕೊಟ್ಟವರಲ್ಲ. ತಮ್ಮ ಕೆಲಸದಿಂದ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಲೇ ಬಂದಿದ್ದಾರೆ” ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಅವರು, ಮಹಾಯೋಗಿ ವೇಮನರು ಶ್ರೇಷ್ಠ ಜ್ಞಾನಿ, ಕವಿ, ಬ್ರಹ್ಮಜ್ಞಾನಿಯಾಗಿದ್ದರು. ಅನಿಷ್ಟ ಸಂಪ್ರದಾಯಗಳ ವಿರುದ್ಧ ಹೋರಾಡಿದಂತಹ ದಿಟ್ಟ ವ್ಯಕ್ತಿಯಾಗಿದ್ದ ಅವರು ತಮ್ಮ ವಿಚಾರ ಮತ್ತು ಚಿಂತನೆಗಳಿಂದ ಸದಾ ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.
ಮಹಾಯೋಗಿ ವೇಮನರು ರಾಜಕುಮಾರನಾಗಿದ್ದರೂ ಕೂಡ ಸಮಾಜಕ್ಕಾಗಿ ತಮ್ಮ ಸುಖ, ಸಂತೋಷ, ಸರ್ವಸ್ವವನ್ನು ತ್ಯಾಗ ಮಾಡಿ ತಮ್ಮ ಕೃತಿಗಳ ಮೂಲಕವಾಗಿ ಇವತ್ತಿಗೂ ನಮ್ಮ ಜೊತೆಗಿದ್ದಾರೆ ಎಂದು ಬಸವರಾಜ ಜಗಜಂಪಿ ತಿಳಿಸಿದರು.
ಬೆಳಗಾವಿ ಲೋಕಾಯುಕ್ತ ಎಸ್.ಪಿ. ಯಶೋಧಾ ಒಂಟಗೋಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲೆಯ ರೆಡ್ಡಿ ಸಂಘದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ, ವೆಂಕಟೇಶ ಪಾಟೀಲ, ಟಿ.ಕೆ.ಪಾಟೀಲ , ಹಾಗೂ ಸಮುದಾಯದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ವೇಮನರ ಭಾವಚಿತ್ರದ ಭವ್ಯ ಮೆರವಣಿಗೆ:
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯ ಆವರಣದಿಂದ ಮಹಾಯೋಗಿ ವೇಮನರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರುಮೆರವಣಿಗೆಗೆ ಚಾಲನೆ ನೀಡಿದರು. ಚೆನ್ನಮ್ಮ ವೃತ್ತ, ಡಾ.ಅಂಬೇಡ್ಕರ್ ರಸ್ತೆ ಮಾರ್ಗವಾಗಿ ಸಂಚರಿಸಿದ ಮೆರವಣಿಗೆಯು ಸದಾಶಿವನಗರದ ರೆಡ್ಡಿ ಭವನ ತಲುಪಿತು. ಸಮಾಜದ ಗಣ್ಯರು, ಮಹಿಳೆಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


