ಬೆಂಗಳೂರು: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆಯನ್ನು ತಕ್ಷಣವೇ ಬಿಜೆಪಿ ಪಕ್ಷದಿಂದ ಕಿತ್ತೊಗೆಯಲಿ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ಬೆನ್ನಲ್ಲೇ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು” ಎಂದು ಸಂಸದ ಅನಂತ್‌ಕುಮಾರ್ ಹೆಗಡೆ ಕರೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆ ಅಲ್ಲ ಅದು ಬಿಜೆಪಿ ಪಕ್ಷದ ಗುಪ್ತ ಅಜೆಂಡಾದ ಭಾಗವೇ ಆಗಿದೆ. ನಮ್ಮ ಸಂವಿಧಾನ ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುತ್ತದೆ.
ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯ ಧರ್ಮವನ್ನು ಪಾಲಿಸಿಕೊಂಡು ಬರುವ ಸ್ವಾತಂತ್ರ್ಯವನ್ನು ನೀಡಿದೆ. ಹೀಗಿರುವಾಗ ಸಂವಿಧಾನವನ್ನೇ ಬದಲಾಯಿಸಿ ಅನಂತ್ ಕುಮಾರ್ ಹೆಗಡೆ ಅವರು ಯಾವ ಹಿಂದೂಧರ್ಮವನ್ನು ರಕ್ಷಿಸಲು ಹೊರಟಿದ್ದಾರೆ? ಹೆಗಡೆಯವರ ಹೇಳಿಕೆಯನ್ನು ಗಮನಿಸಿದರೆಬಾಬಾಸಾಹೇಬ್ ಅಂಬೇಡ್ಕರ್ ರಚಿಸಿ ಕೊಟ್ಟ ಸಂವಿಧಾನಕ್ಕಿಂತ ಮೊದಲು ಇದ್ದ ಮನು ಪ್ರಣೀತ ಸಂವಿಧಾನವನ್ನು ಜಾರಿಗೊಳಿಸುವ ದುಷ್ಠ ಆಲೋಚನೆ ಹೆಗಡೆ ಮತ್ತು ಬಿಜೆಪಿ ಪಕ್ಷಕ್ಕೆ ಇದೆ ಎನ್ನುವುದು ಸ್ಪಷ್ಟ ಎಂದಿದ್ದಾರೆ.


