ತುಮಕೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಚರ್ಚೆಗೆ ತಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು, ರಾಜ್ಯ ಮಾದಿಗ ದಂಡೋರ ಸಮಿತಿಯ ನಿಯೋಗವು ಬೆಳಗಾವಿಯ ಅಧಿವೇಶನದಲ್ಲಿ ಮನವಿ ಸಲ್ಲಿಸಿದ್ದು, ಈ ಸಂಬಂಧ ಮಾದಿಗ ದಂಡೋರದ ರಾಜ್ಯ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.
ಮುಖಂಡರಾದ ಚನ್ನಬಸವಯ್ಯ ಮಾತನಾಡಿ, ಮಾದಿಗ ದಂಡೋರದ ನಿಯೋಗವು ಸಚಿವರಾದ ಮಾಧುಸ್ವಾಮಿ ಹಾಗೂ ಸಮಾಜ ಕಲ್ಯಾಣ ಸಚಿವರ ಸಮ್ಮುಖದಲ್ಲಿ, ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಈ ವೇಳೆ ಮುಖ್ಯಮಂತ್ರಿಯವರು, ನಮ್ಮ ನಿಯೋಗವು ನೀಡಿದ ಮನವಿಯನ್ನು ಸ್ವೀಕರಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚಿಸಲು, ಸಂಬಂಧಿಸಿದ ಇಲಾಖೆ ಹಾಗೂ ಸಚಿವರು ಸಿದ್ಧತೆ ಮಾಡಿಕೊಳ್ಳಲು ಕನಿಷ್ಠ ಪಕ್ಷ ಹದಿನೈದು ದಿನಗಳ ಆವಶ್ಯಕತೆ ಇರುವುದರಿಂದ, ಈ ಬೆಳಗಾವಿಯ ಅಧಿವೇಶನದಲ್ಲಿ ಚರ್ಚಿಸಲು ಸಾಧ್ಯವಿಲ್ಲ, ಆದರೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಚರ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು.
ಸಿಎಂ ಭೇಟಿಗೆ ಜೆ.ಸಿ.ಮಾಧುಸ್ವಾಮಿ ಅವಕಾಶ ಮಾಡಿಕೊಟ್ಟಿದ್ದು, ಎಲ್ಲಾ ರೀತಿಯ ಸಹಕಾರ ನೀಡಿದರು ಎಂದು ತಿಳಿಸಿದ ಚನ್ನಬಸವಯ್ಯ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ವಿಧಾನ ಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಾವೆಲ್ಲರೂ ಒಂದಾಹೋರಾಡಬೇಕಿದೆ ಎಂದು ಅವರು ಇದೇ ವೇಳೆಯಲ್ಲಿ ಕರೆ ನೀಡಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಾದಿಗ ದಂಡೋರ ಅಧ್ಯಕ್ಷ ಜೆ.ಸಿ.ಪುರ ಗೋವಿಂದರಾಜು ಮಾತನಾಡಿ, ಸದಾಶಿವ ಆಯೋಗವು ಅವೈಜ್ಞಾನಿಕ ಎಂದು ದಾರಿತಪ್ಪಿಸುತ್ತಿರುವರು, ಸ್ಪೃಷ್ಯರಾಗಿದ್ದು, ಅಸ್ಪೃಶ್ಯರ ಮೀಸಲಾತಿಯನ್ನು ಕಬಳಿಸಿ, ನಿಜವಾದ ಅಸ್ಪೃಶ್ಯರ ಅವಕಾಶಗಳನ್ನು ಕಬಳಿಸುತ್ತಿದ್ದಾರೆ. ಇವರಿಗೆ ನೀಡಿರುವ ಮೀಸಲಾತಿ ಅವೈಜ್ಞಾನಿಕವೇ ಹೊರತು ಸದಾಶಿವ ವರದಿ ಅವೈಜ್ಞಾನಿಕವಾಗಿಲ್ಲ ಎಂದು ಪ್ರತಿಪಾದಿಸಿದರು.
ಇದಕ್ಕೆ ದನಿಗೂಡಿಸಿದ ಮಾದಿಗ ಸಮಾಜದ ಚಿಂತಕ ತರಬೇನಹಳ್ಳಿ ಚಿದಾನಂದ ಮೂರ್ತಿ, ಮಾದಿಗ ಸಮುದಾಯವು ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಒತ್ತಾಯಿಸಲು, ಮಾದಿಗ ಸಮುದಾಯದ ಎಲ್ಲಾ ಹಾಲಿ ಹಾಗೂ ಮಾಜಿ ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್, ಸ್ಥಳೀಯ ಸಂಸ್ಥೆಗಳ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಶಾಸಕರು, ಸಚಿವರು, ರಾಜ್ಯಸಭೆ ಹಾಗೂ ಲೋಕಸಭಾ ಸದಸ್ಯರು, ಉದ್ಯಮಿಗಳು, ಸರಕಾರಿ ಅಧಿಕಾರಿ ವರ್ಗ ಸೇರಿದಂತೆ, ಮಾದಿಗ ಸಮುದಾಯದ ಎಲ್ಲಾ ಜನರನ್ನು ಒಂದೇ ವೇದಿಕೆಯಡಿ ತಂದು ಬೃಹತ್ ಸಮಾವೇಶ ನಡೆಸಿ, ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ, ಹೆಸರಹಳ್ಳಿ ಗೋಪಾಲ್, ಅಗಸರಹಳ್ಳಿ ಮೂರ್ತಿ, ಜಯರಾಮಯ್ಯ, ನೀಲಕಂಠ, ಶೋಭಾ ಕೃಷ್ಣಮೂರ್ತಿ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.
ವರದಿ: ಚಿದಾನಂದಮೂರ್ತಿ ತರಬೇನಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700