ಎಲ್ಲವೂ ಬದಲಾದ ಸ್ಥಿತಿಯಲ್ಲಿ ಶಿಕ್ಷಕವರ್ಗ ಮಾತ್ರ ಬದಲಾಗಿಲ್ಲ. ಸಮಾಜವನ್ನು ಸರಿದಾರಿಗೆ ತರುವ ಶಿಕ್ಷಕರಿಗೆ ಸಮಾಜವೇ ಬೇರೆದಾರಿಗೆ ಸೆಳೆಯುತ್ತಿದೆ ಎನ್ನುವುದೇ ವಾಸ್ತವದ ಸ್ಥಿತಿಗತಿ. ಇದನ್ನು ವಿವರಿಸುವಲ್ಲಿ ಹಲವಾರು ವಿಷಯಗಳು ಸಿಗುವಂಥದ್ದೇ ನಮಗೆ ಗಮನೀಯ ಮತ್ತು ವಿಪರ್ಯಾಸದ ಸಂಗತಿ. ಎಲ್ಲವೂ, ಒಳಿತು-ಕೆಡುಕುಗಳನ್ನು ಒಳಗೊಂಡಂತೆ ಶಿಕ್ಷಕ ಸಮುದಾಯವೂ ಸಹ ಒಳಗೊಂಡಿದೆ. ಹಿಂದೆಲ್ಲಾ ಗುರುವಿನ ಸ್ಥಾನವನ್ನು ಸಾಮಾನ್ಯರು ತುಂಬುವಂತಿರಲಿಲ್ಲ, ಅದಕ್ಕೆ ಒಂದು ಮೌಲ್ಯಯುತ ನೈತಿಕ ವ್ಯಕ್ತಿತ್ವವಿರಬೇಕಾಗಿತ್ತು, ನಂತರವೇ ಬೋಧನೆ ಎಂಬುವುದು ಜರಗುತ್ತಿತ್ತು. ಹಾಗಾಗಿಯೂ ಸ್ವತಃ ಯಾರ್ಯಾರೋ ಆ ಹುದ್ದೆಯನ್ನು ಬಯಸುತ್ತಿರಲಿಲ್ಲ. ಆ ಹುದ್ದೆಗೆ ತಾನು ಸೂಕ್ತ ಮತ್ತು ಪ್ರಾಮಾಣಿಕ ಕರ್ತವ್ಯನಿಷ್ಠನಾಗಿರುವೆ ಎನಿಸಿದಾಗಲೇ ಆಸಕ್ತಿಗನುಗುಣವಾಗಿ ಮತ್ತು ಅಭ್ಯಾಸ ಪೂರ್ಣವಾಗಿ ಆ ಗುರುಸ್ಥಾನವನ್ನು ಅಲಂಕರಿಸುತ್ತಿದ್ದರು. ಆದರೆ ಈಗ ಹಾಗಲ್ಲ, ಪದವಿಗಳನ್ನು ಹೊಂದಿದರೆ ಸಾಕು ಅವರೆಲ್ಲರೂ ಶಿಕ್ಷಕರಾಗಲು ಒಂದು ವಿಧದಲ್ಲಿ ಅರ್ಹರೇ.
ಇನ್ನೊಂದು ಪ್ರಮುಖ ವಿಷಯ ಎಂದರೆ ಆಗಿನ ಗುರುಗಳಿಗೆ ಒಂದು ಸೂಚ್ಯವಾದ ವೇಷಭೂಷಣ, ನಡೆ-ನುಡಿ, ಜೀವನ ಶೈಲಿ ಎಲ್ಲವೂ ಇತ್ತು. ಯಾರೇ ಅವರನ್ನು ಕಂಡರೂ ತಕ್ಷಣ ಹೇಳಿಬಿಡುತ್ತಿದ್ದರು ಇವರು ಗುರುಗಳು ಎಂದು. ಆದರೆ ವಾಸ್ತವದಲ್ಲಿ ಬಹುಪಾಲು ಶಿಕ್ಷಕರು ಗುರುತು ಹಚ್ಚದ ರೀತಿಯಲ್ಲಿರುತ್ತಾರೆ. ಅಂದರೆ ಗುರು ಸ್ಥಾನವನ್ನು ಪೂರ್ಣ ವ್ಯಕ್ತಿತ್ವವನ್ನಾಗಿಸಿಕೊಂಡಿಲ್ಲ ಎನ್ನುವುದೇ ಸತ್ಯ. ಒಂದು ವೃತ್ತಿಯನ್ನಾಗಿ ಮತ್ತು ತಮ್ಮ ಜೀವನೋಪಾಯಕ್ಕಾಗಿ ಶಿಕ್ಷಕ ಹುದ್ದೆಯನ್ನು ಆಯ್ಕೆಮಾಡಿಕೊಂಡಿರುತ್ತಾರೋ ವಿನಃ ಆ ವೃತ್ತಿಯಲ್ಲಿನ ಸಾಮಾಜಿಕ ಸೇವೆಯನ್ನು ಗುರುತಾಗಿಸಿಕೊಂಡಿರುವುದಿಲ್ಲ, ದೇಶದ ಜವಬ್ದಾರಿಯನ್ನು ನೆನೆದಿರುವುದಿಲ್ಲ. ಸಿಗುವ ಸಂಬಳದಲ್ಲಿ ಎಲ್ಲಿ ಬಂಡವಾಳ ಹೂಡಬೇಕು, ಎಲ್ಲಿ ಆಸ್ತಿಮಾಡಬೇಕು, ಎಷ್ಟು ಹಣವನ್ನು ಬಡ್ಡಿಗೆ ಬಿಡಬೇಕು, ಜೀವನವನ್ನು ಐಷರಾಮಿ ಮಾದರಿಯಲ್ಲಿ ಹೇಗೆ ಕಳೆಯಬೇಕು ಎಂದು ಚಿಂತಿತರಾದ ಶಿಕ್ಷಕರು ಹೆಚ್ಚಾಗುತ್ತಿದ್ದಾರೆ. ಇವರು ತಮ್ಮ ಬದುಕಿನ ನಿರ್ಮಾಣಕ್ಕೆ ನಿಂತವರು, ಸಮಾಜದ ಮತ್ತು ವಿದ್ಯಾರ್ಥಿಗಳ ಬದುಕನ್ನು ಹೇಗೆ ತಾನೇ ನಿರ್ಮಾಣ ಮಾಡಲು ಪೂರ್ಣ ಆಸಕ್ತಿ ತೋರಿಯಾರು. ಇವರುಗಳು ತಮ್ಮ ಬದುಕನ್ನು ಬಡವಾಗಿಸಿಕೊಂಡು ಸಮಾಜಕ್ಕೆ ಪೂರ್ಣವಾಗಿ ತೆರೆದುಕೊಳ್ಳಲಿ ಎಂದಲ್ಲ. ನೈತಿಕ ಸಮತ್ವಕ್ಕೆ ಶಿಕ್ಷಕರು ಅಣಿಯಾಗಿ ಸಮಾಜದ ಸ್ವಾಸ್ಥ್ಯಕ್ಕೆ ಬದುಕುವುದು ಅವರುಗಳ ಹಕ್ಕು ಮತ್ತು ಕರ್ತವ್ಯವಾಗಿದೆ.
ಇಲ್ಲಿ ಈಗ ಈ ಶಿಕ್ಷಕ ರಂಗದಲ್ಲಿ ಪೂರ್ಣವಾಗಿ ಯಾವುದೂ ಮತ್ತು ಯಾರೂ ಹದಗೆಟ್ಟಿಲ್ಲ ಹಾಗೆಯೇ ಯಾರೂ ಸಹ ಪೂರ್ಣವಾಗಿ ಶಿಕ್ಷಕರಾಗಿಲ್ಲ, ಆದರೆ ಬಹುಪಾಲು ಹದಗೆಟ್ಟಿರುವುದು ಟೀಕಾರ್ಹ. ಮದ್ಯಪಾನ ಮತ್ತು ಧೂಮಪಾನ ಮಾಡಬೇಡಿ, ಗುರುಹಿರಿಯರಿಗೆ ಗೌರವ ನೀಡಿ, ತಂದೆ ತಾಯಿಯರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳಿ, ಸರ್ವಧರ್ಮವು ಒಂದೇ, ಜಾತಿ-ವಿಜಾತಿ ಎನ್ನುವುದೆಲ್ಲಾ ಭ್ರಮೆ ಮನುಷ್ಯ ಜಾತಿಯೇ ಸತ್ಯ, ಸಮಾಜದಲ್ಲಿ ಒಳ್ಳೆಯದಾಗಿ ಕಾಣಿಸಿಕೊಳ್ಳಬೇಕು, ಕಾಮಭ್ರಷ್ಟರಾಗಬೇಡಿ ಹೀಗೆ ಹಲವಾರು ಮೌಲ್ಯಯುತ ಜೀವನಾಂಶಗಳನ್ನು ತರಗತಿಯಲ್ಲಿ ಬೋಧನೆ ಮಾಡುವ ಶಿಕ್ಷಕರಲ್ಲಿ ಬಹುಪಾಲು ಶಿಕ್ಷಕರು, ಮದ್ಯಪಾನ ಮಾಡುತ್ತಾರೆ, ಧೂಮಪಾನ ಮಾಡುತ್ತಾರೆ, ತಂದೆ ತಾಯಿಗೆ ಅಗೌರವಿಸುತ್ತಾರೆ, ಜಾತಿ ಪ್ರತಿಪಾದಿಸುತ್ತಾರೆ. ಹೀಗೆ ವಿದ್ಯಾರ್ಥಿಗಳಿಗೆ ಯಾವುದು ತಪ್ಪು, ಯಾವುದನ್ನು ಮಾಡಬೇಡಿ ಎಂದು ಸೂಚ್ಯಮಾಡಿ ಬೋಧನೆ ಮಾಡಿರುತ್ತಾರೋ ಅವರೇ ಅದೇ ತಪ್ಪುಗಳನ್ನು ತಮ್ಮ ಬದುಕಿನಲ್ಲಿ ಮಾಡುತ್ತಿರುತ್ತಾರೆ. ಈಗಾಗಲಿಕ್ಕೆ ಪೂರ್ಣವಾಗಿ ಅವರೇ ಕಾರಣ ಎಂದು ಹೇಳುವುದು ತಪ್ಪಾಗುತ್ತದೆ. ಬದಲಾದ ಆಧುನಿಕ ಜಗತ್ತಿಗೆ ಅನ್ವಯವಾಗಿ ಈ ಶಿಕ್ಷಕ ವ್ಯವಸ್ಥೆ ಹೀಗಾಗಿದೆ.
ನಮ್ಮ ಶಿಕ್ಷಣ ಪದ್ಧತಿಯೂ ಸಹ ಅಷ್ಟಕಷ್ಟೇ, ಶಿಕ್ಷಕರನ್ನು ತಯಾರು ಮಾಡುವುದರಲ್ಲಿ ಎಡವಿದೆ. ಈ ಪದವಿಗಳನ್ನು ಇಟ್ಟುಕೊಂಡು ಶಿಕ್ಷಕರನ್ನು ತಯಾರು ಮಾಡುವುದು ಅಷ್ಟರಲ್ಲೇ. ಏಕೆಂದರೆ ತಾವು ಕಲಿತ ವಿಷಯಗಳನ್ನು ಸೃಜನಾತ್ಮಕವಾಗಿ ಬೋಧಿಸಬಹುದು ಆದರೆ ಮೌಲ್ಯಗಳನ್ನು ತಿಳಿಸುವಾಗ ಆ ಪರಿಣಾಮಕಾರಿ ಬೋಧನೆ ಆಗುತ್ತಿಲ್ಲವಾದರೆ ಎಲ್ಲವೂ ವ್ಯರ್ಥ. ಈ ಹಲವಾರು ವ್ಯರ್ಥಗಳಿಂದ ಅನರ್ಥಗಳೇ ಸೃಷ್ಟಿಯಾಗುತ್ತಿದೆ. ಏಕೆಂದರೆ ನುಡಿದಂತೆ ನಡೆಯಬೇಕಾದ್ದದ್ದು ಶಿಕ್ಷಕ ವೃತ್ತಿ. ನಡೆ-ನುಡಿ ವಿರುದ್ಧವಾಗಿದ್ದು ಎಷ್ಟೇ ಸೃಜನಾತ್ಮಕವಾಗಿ ಬೋಧಿಸಿದರೂ ಅದು ಪ್ರಯೋಜನವಾಗುವುದಿಲ್ಲ.
ಇನ್ನೊಂದು ಅಂಶವೆಂದರೆ ಈ ಆಧುನಿಕ ಶಿಕ್ಷಕರನ್ನು ಪೂರ್ಣ ಅಪರಾಧಕ್ಕೆ ನೂಕಲು ಸಾಧ್ಯವೇ ಇಲ್ಲ. ಆರಂಭದಲ್ಲೇ ಹೇಳಿದ ಹಾಗೆ “ಸಮಾಜವನ್ನು ಸರಿದಾರಿಗೆ ತರುವ ಶಿಕ್ಷಕರನ್ನು ಸಮಾಜವೇ ಬೇರೆದಾರಿಗೆ ಸೆಳೆಯುತ್ತಿದೆ. ಶಿಕ್ಷಕರಾಗುವ ಮೊದಲು ಅವರು ಈ ಸಮಾಜದಲ್ಲಿ ಯಾವ ರೀತಿಯ ಜೀವನಶೈಲಿಯಲ್ಲಿ ಇದ್ದರು ಎನ್ನುವುದೂ ಸಹ ಮುಖ್ಯವಾಗುತ್ತದೆ. ಶಾಲಾ ಹಂತದಲ್ಲಿ , ಉನ್ನತ ಶಿಕ್ಷಣದ ಹಂತದಲ್ಲಿ, ವೈಯಕ್ತಿಕ ಜೀವನದಲ್ಲಿ ತೊಡಗಬಾರದ ಎಲ್ಲಾ ಚಟುವಟಿಕೆಗಳಲ್ಲೂ ತೊಡಗಿದ್ದು ನಂತರ ವೃತ್ತಿಪರ ಶಿಕ್ಷಕರ ತರಬೇತಿಯನ್ನು ಒಂದೆರೆಡು ವರ್ಷ ಕಲಿತು ಪಾಠ ಮಾಡಲು ಬಂದರೆ ಇನ್ನೇನಾಗುತ್ತದೆ. “ಹುಟ್ಟು ಗುಣ ಸುಟ್ಟರೂ ಹೋಗೊಲ್ಲ” ಎನ್ನುವ ಗಾದೆಯೇ ನಮಗೆ ಸತ್ಯಾಂಶವಾಗಿರುವಾಗ ಅವರ ಹವ್ಯಾಸಗಳು, ಅಭ್ಯಾಸಗಳು ವೃತ್ತಿ ಸಂಧರ್ಭದಲ್ಲಿ ಮರುಕಳಿಸದೇ ಇದ್ದೀತೆ. ಹಾಗಾಗಿ ಶಿಕ್ಷಕರಾಗುವವರು ಕೇವಲ ವೃತ್ತಿಯಲ್ಲಿ ಪರಿಣತರಾದರೆ ಸಾಲದು ಬದುಕಿನ ಮೂಲಾಂಶಗಳಲ್ಲಿ ಪಕ್ವವಾಗಿರಬೇಕು. ಅಂಥವರು ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಒಂದು ಅಮೂಲಾಗ್ರ ಬದಲಾವಣೆ ಖಂಡಿತ ಸಾಧ್ಯ. ಮಿಕ್ಕವರು ಶಿಕ್ಷಕ ವೃತ್ತಿಗೆ ಬರದಿರುವುದೇ ಒಳ್ಳೆಯದು.
ಶಿಕ್ಷಣ ಕ್ಷೇತ್ರದಲ್ಲಿ ಅಧಿಕಾರ ಮತ್ತು ಅಧೀನಭಾವ ಹೆಚ್ಚಾಗಿದೆ. ಈ ರಾಜಕೀಯದ ಸ್ವರೂಪಗಳು ಶಿಕ್ಷಣ ಕ್ಷೇತ್ರವನ್ನು ಹೆಚ್ಚು ಹೆಚ್ಚಾಗಿ ಆವರಿಸಿ ಬಿಟ್ಟಿದೆ. ಉದಾಹರಣೆಗೆ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆಸುವ ಪೈಪೋಟಿ ಅಷ್ಟಿಷ್ಟಲ್ಲ, ಅಲ್ಲೂ ಕೂಡ ಆಮಿಷಗಳನ್ನು ಒಡ್ಡುವುದು ಹೊರತೇನಲ್ಲ. ಖಾಸಗಿ ಸಂಸ್ಥೆಗಳ ಆರ್ಭಟ ಮತ್ತು ಅವುಗಳಲ್ಲಿನ ನಿಯಮಗಳು ಮತ್ತು ಮಾರುಕಟ್ಟೆಯಲ್ಲಿ ಅವುಗಳ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಅವುಗಳ ಹೋರಾಟದ ರೀತಿ ಎಲ್ಲವೂ ಉತ್ತಮ ಶಿಕ್ಷಕರನ್ನು ಹೊರತರುವಲ್ಲಿ ಅದುಮಿದೆ. ಹಣ ಮಾಡುವ ಧಂಧೆಯಲ್ಲಿ ಒಳಿತುಗಳನ್ನು ಹೆಚ್ಚು ಹುಡುಕುವುದು ದಡ್ಡತನ. ಸುಮ್ಮನೇ ಎಲ್ಲರೂ ರೂಢಿಗೊಳಿಸಿರುವ ವಿಷಯಗಳನ್ನು ಕಲಿಸುತ್ತಾರೆ, ಕಲಿಯುತ್ತಾರೆ, ಕೆಲವರು ಮಾತ್ರ ಒಳ್ಳೆಯ ರೀತಿಯಲ್ಲಿ ಅನ್ವಯ ಮಾಡಿಕೊಂಡು ಅಲ್ಲೊಬ್ಬಾಕೆ ಮದರ್ ತೆರೆಸಾ ಆದರೆ ಇಲ್ಲೊಬ್ಬ ಅಂಬೇಡ್ಕರ್ ಅವರ ರೀತಿ ಮತ್ತು ಮತ್ತ್ಯಾರೋ ಮಹನೀಯರ ರೀತಿ ಆಗಬಹುದು. ಉಳಿದವರು ಲೌಕಿಕ ಪರಿಸರದ ವಿವಿಧ ಕ್ಷೇತ್ರದ ದುರ್ಲಾಭಿಗಳೇ ಆಗಲು ಹೊರಟಿರುತ್ತಾರೆ.
ಅಪ್ರಮಾಣಿಕರಿಗೆ ಉತ್ತಮ ಜೀವನ ಮತ್ತು ಪ್ರಾಮಾಣಿಕರಿಗೆ ಕಷ್ಟದ ಜೀವನ ಸಿಗುತ್ತಿರುವ ಈ ಸಮಾಜದಲ್ಲಿ ಒಳ್ಳೆಯದನ್ನು ಆರಿಸಿಕೊಂಡು ಒಳ್ಳೆಯವರಾಗಿ ಇರಲು ಎಷ್ಟು ಸಾಧ್ಯ ಎನ್ನುವ ದ್ವಂದ್ವದಲ್ಲಿ ತಪ್ಪು ಹಾದಿ ಹಿಡಿಯುವವರು ಹಲವರಾದರೆ. ದೊಡ್ಡ ದೊಡ್ಡ ಅಧಿಕಾರಿಗಳ ದರ್ಪಕ್ಕೆ ಒಳಗಾಗಿರುವ ಸಮಾಜದಲ್ಲಿ ಎಲೆಮರೆಕಾಯಿಯ ಅಲ್ಲೊಬ್ಬರು, ಇಲ್ಲೊಬ್ಬರು ಉತ್ತಮ ಶಿಕ್ಷಕರು ಕಾಣಸಿಗುವವರು ಕೆಲವರು ಮಾತ್ರ. ಈಗ ಇರುವ ಶಿಕ್ಷಕರ ವಾಸ್ತವನೋಟ ಕಹಿಯೇ ಆದರೂ ಎಷ್ಟೋ ವಿಚಾರಗಳನ್ನು ಒಪ್ಪಿಕೊಳ್ಳಲಾಗದಿದ್ದರು ಈ ವಿಚಾರ ಸತ್ಯ.
ಅವರ ಸಮಸ್ಯೆಗಳಲ್ಲಿನ ಸ್ಥಿತಿಗತಿಗಳನ್ನು ನೋಡುವುದಾದರೇ ಕೆಲವರ ಸ್ಥಿತಿ ಅಯ್ಯೋ ಎನ್ನುವಷ್ಟರ ಮಟ್ಟಿಗೆ ಇದೆ. ಈ ಅಯ್ಯೋ ಎನಿಸಿಕೊಳ್ಳುವವರೆಲ್ಲಾ ಬಹುಪಾಲು ಹಿಂದಿನ ದಿನಗಳಲ್ಲಿ ಕಷ್ಟದ ದಿನಗಳನ್ನು ಎದುರಿಸಿ, ತಕ್ಕಮಟ್ಟಿಗೆ ಈ ಸಮಾಜದ ಈ ಶಿಕ್ಷಣ ವ್ಯವಸ್ಥೆಯ ಪದವಿಗಳನ್ನು ಪಡೆದುಕೊಂಡು ವಿಧಿಯಿಲ್ಲದೇ ಶಿಕ್ಷಕ ವೃತ್ತಿಯಲ್ಲಿ ಕಡಿಮೆ ಸಂಬಳಕ್ಕೆ ಹೆಚ್ಚು ಶ್ರಮಪಟ್ಟು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮತ್ತು ತಮ್ಮ ಜೀವನೋಪಾಯಕ್ಕಾಗಿ ಬೋಧಿಸುತ್ತಿರುವರು. ಕಷ್ಟ ಎಂದರೆ ಹೆಚ್ಚಿಗೆ ಏನು ವಿವರಿಸಬೇಕಾಗಿಲ್ಲ, ಇವರಲ್ಲಿ ಆದರ್ಶಗಳು ಹೆಚ್ಚಿರುತ್ತದೆ; ಆರ್ಥಿಕತೆಯು ಕುಗ್ಗಿರುತ್ತದೆ. ಈಗಿನ ಸಮಾಜದಲ್ಲಿ ಬದುಕಲು ಹಣ ಮುಖ್ಯವಾದ್ದರಿಂದ ಇದರ ಕೊರತೆಯಲ್ಲಿ ಹುಟ್ಟುಕೊಂಡ ಹಲವಾರು ಸಮಸ್ಯೆಗಳು ಬಾಹ್ಯವಾಗಿ ಇವರನ್ನು ಭಾದಿಸಿದರೆ; ವೃತ್ತಿಯಲ್ಲಿ ಒಂದಷ್ಟು ಹೊಂದಾಣಿಕೆ ಕೆಟ್ಟಿರುವುದು, ಮೇಲಧಿಕಾರಿಗಳ ದರ್ಪ, ಜಾತಿತಾರತಮ್ಯದ ಅಸಹಜ ಸ್ಥಿತಿಗೆ ಹೊಂದಿಕೊಳ್ಳುವ ಸಂಕಟ ಹೀಗೆ ಎಲ್ಲವೂ ಇರುತ್ತದೆ. ಇದಕ್ಕೆ ಸರ್ಕಾರದ ಯೋಜನೆಗಳು ತೃಪ್ತಿದಾಯಕವಾಗಿಲ್ಲ. ಸಮಾಜವೂ ಸಹ ಹೊಂದಾಣಿಕೆಯಾಗಿಲ್ಲ. ಸಮಸ್ಯೆಗಳನ್ನು ನೆನೆಯುತ್ತಿದ್ದರೆ ಇಡೀ ಪ್ರಪಂಚವೇ ಸಮಸ್ಯೆ ಎನಿಸುತ್ತದೆ.
ಈಗ ಒಳಿತುಗಳನ್ನು ಗಮನಿಸೋಣ. ಶಿಕ್ಷಕ ವರ್ಗದಲ್ಲಿನ ಮಾತೃ ಹೃದಯರಿಂದಾಗಿ ಎಷ್ಟೋ ಮಕ್ಕಳ ಭವಿಷ್ಯ ಊರ್ಜಿತಗೊಳ್ಳುತ್ತಿದೆ ಅಂತವರಿಗೆ ಸಾವಿರ ಶರಣು. ತಮ್ಮ ತಿಂಗಳ ಸಂಬಳದಲ್ಲಿ ಬಡ ವಿದ್ಯಾರ್ಥಿಗಳನ್ನು ಓದಿಸುವ , ಮಕ್ಕಳಲ್ಲಿನ ಸೃಜನತೆಯನ್ನು ಗುರುತಿಸಿ ಅವರನ್ನು ತಾಲ್ಲೂಕು ಮಟ್ಟದಿಂದ ರಾಷ್ಟ್ರ ಮಟ್ಟದವರೆವಿಗೆ ಕೊಂಡೊಯ್ಯಲು ಶ್ರಮಿಸುತ್ತಿರುವ, ಒಂದು ಶಾಲಾ ವ್ಯವಸ್ಥೆ ಎಂದರೆ ಹೀಗೆಯೇ ಇರಬೇಕು, ಒಂದು ಶಿಕ್ಷಣ ವ್ಯವಸ್ಥೆ ಎಂದರೆ ಸುವ್ಯವಸ್ಥಿತ ಮಾದರಿಯ ನೋಟವಿರಬೇಕು; ಉತ್ತಮ ಕಲಿಕಾ ಚಟುವಟಿಕೆ ಇರಬೇಕು, ಉತ್ತಮ ಬೋಧನೆಯೊಂದಿಗೆ ಮೌಲ್ಯವಿರಬೇಕು ಎಂದೆಲ್ಲಾ ಇನ್ನೂ ಬಹುವಾಗಿ ಯೋಜಿತರಾಗುತ್ತಿರುವ ಶಿಕ್ಷಕರಿಗೆ ಸಮಾಜ ಮತ್ತು ಸರ್ಕಾರ ಉತ್ತಮ ಸಹಕಾರವನ್ನು ಸೂಚಿಸಬೇಕು. ಈ ಸಹಕಾರದ ಕೊರತೆಯಲ್ಲಿ ಒಂದಷ್ಟು ಆದರ್ಶ ಶಿಕ್ಷಕರು ನಿರಾಸೆಯಿಂದ ಹಿಂದುಳಿಯುತ್ತಿದ್ದಾರೆ. ಅವರ ಒಳ್ಳೆಯ ಯೋಜನೆಗಳಿಗೆ ಒಳ್ಳೆಯ ಸ್ಪಂದನೆ ಅಗತ್ಯ. ಎಲ್ಲೋ ಒಬ್ಬ ಶಿಕ್ಷಕ ಮಾಡಿದ ತಪ್ಪಿಗೆ ಇಡೀ ಶಿಕ್ಷಕ ಸಮುದಾಯವನ್ನು ನಿಂದಿಸುವುದು ಒಳಿತಲ್ಲ. ಅಂತಹ ಶಿಕ್ಷಕನನ್ನು ತಕ್ಷಣ ಅಮಾನತುಗೊಳಿಸಿ ಉಳಿದ ಶಿಕ್ಷಕರನ್ನು ಗೌರವಿಸಬೇಕಾದ್ದದ್ದು ಮುಖ್ಯ. ಶಿಕ್ಷಕ ಮತ್ತು ಶಿಕ್ಷಣವಿಲ್ಲದೇ ಉತ್ತಮ ಸಮಾಜ ಅಸಾಧ್ಯ, ಇವೆರೆಡು ಉತ್ತಮವಾಗಿರುವ ದೇಶವು ಮೌಲ್ಯಯುತ ರಾಷ್ಟ್ರವಾಗುವುದರಲ್ಲಿ ಸಂದೇಹವಿಲ್ಲ. ಉತ್ತಮರು ಶಿಕ್ಷಕರಾಗಿ ಬರಲಿ ಉತ್ತಮ ಪ್ರಜೆಗಳು ನಿರ್ಮಾಣವಾಗಲಿ, ಪ್ರಭುತ್ವ ರಾಷ್ಟ್ರಕ್ಕೆ ಕಾರಣವಾಗಲಿ…
– ಚಿಮಬಿಆರ್ (ಮಂಜುನಾಥ ಬಿ ಆರ್)
ಯುವಸಾಹಿತಿ, ಸಂಶೋಧಕ, ವಿಮರ್ಶಕ,
ಹೆಚ್.ಡಿ.ಕೋಟೆ ಮೈಸೂರು.
ದೂರವಾಣಿ ಸಂಖ್ಯೆ: 8884684726
Email : manjunathabr709@gmail.com
●ತಮ್ಮ ಲೇಖನ ಹೀಗೆ ಮುಂದುವರೆಯಲಿ ಸರ್… ದೇವರು ತಮಗೆ ಇನ್ನೂ ಹೆಚ್ಚಿನ ಲೇಖನ ಬರೆಯುವ ಶಕ್ತಿ ಕೊಡುವುದರ ಜೊತೆಗೆ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಾ ಶುಭ ಕೋರುತ್ತಿದ್ದೇನೆ.
ಇಂದ: ಯತೀಶ್ ಕುಮಾರ್ (ಚಿತ್ರಕಲಾ ಶಿಕ್ಷಕರು)
ರಾಜ್ಯ ಮಟ್ಟದ “ಶಿಕ್ಷಕ ರತ್ನ” ಪ್ರಶಸ್ತಿ ಪುರಸ್ಕೃತರು,
ಮತ್ತು ಪ್ರಧಾನ ಕಾರ್ಯದರ್ಶಿ, ಸರ್ಕಾರಿ ಚಿತ್ರಕಲಾ ಮಹಾ ವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ (ರಿ.,)
ತುಮಕೂರು.