ಬೆಳಗಾವಿ : ಜಿಲ್ಲೆಯಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್ಸ್ ಇಲ್ಲ ಆದರೆ ಅವರ ಅವಲಂಬಿತರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯಬೇಕು ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಫಾಯಿ ಕರ್ಮಚಾರಿ ಅಧ್ಯಕ್ಷರಾದ ಎಂ. ಶಿವಣ್ಣ ಕೋಟೆ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಆ.25) ನಡೆದ ಸಫಾಯಿ ಕರ್ಮಚಾರಿ/ ಪೌರ ಕಾರ್ಮಿಕರ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2013ರ ಹಿಂದೆ ಈ ಕೆಲಸ ಮಾಡಿದವರು ಇನ್ನೂ ಪತ್ತೆ ಹಚ್ಚಲು ಆಗಿಲ್ಲ. ಗ್ರಾಮೀಣ ಭಾಗದಲ್ಲಿ ಈ ಹಿಂದೆ ಕೆಲಸ ಮಾಡಿದವರು ಅನೇಕರಿದ್ದಾರೆ. ಅಂತಹವರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಬೇಕು ಎಂದು ಸಫಾಯಿ ಕರ್ಮಚಾರಿ ಜಿಲ್ಲಾ ಸದಸ್ಯ ವಿಜಯ ಹಿರಿಕಟ್ಟಿ ಮನವಿ ಮಾಡಿಕೊಂಡರು.
ಮ್ಯಾನ್ಯುವಲ್ ಸ್ಕ್ಯಾವೆಂಜರ್ ಅಥವಾ ಅವರ ಅವಲಂಬಿತರು ಇದ್ದರೆ ಅಂತವರಿಗೆ ಕೌಶಲ್ಯ ತರಬೇತಿ, ಪುನರ್ವಸತಿ ಸೇರಿದಂತೆ ಅವಶ್ಯ ಸೌಲಭ್ಯಗಳನ್ನು ನೀಡಲಾಗುವುದು. ಈಗಾಗಲೇ ಅನೇಕ ಬಾರಿ ಸಮೀಕ್ಷೆ ನಡೆಸಿ, ಗುರುತಿಸಲಾಗುತ್ತಿದೆ. ಈ ಕಾರ್ಯದಲ್ಲಿ ತೊಡಗಿರುವ ಬಗ್ಗೆ ಸರಿಯಾದ ದಾಖಲೆ ಇರಬೇಕು ಅಥವಾ ಅಂತವರ ಅವಲಂಬಿತರು ಬಗ್ಗೆ ಸರಿಯಾದ ಮಾಹಿತಿ ಇರಬೇಕು ಅವರಿಗೆ ಸೌಲಭ್ಯ ಕಲ್ಪಿಸಲು ಸೂಚನೆ ನೀಡಲಾಗುವದು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈಗಾಗಲೇ ಈ ಕಾಯ್ದೆ ಜಾರಿ ತರುವ ಮೂಲಕ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅಧ್ಯಕ್ಷ ಶಿವಣ್ಣ ಕೋಟೆ ಹೇಳಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿ, ಎಲ್ಲಾ ಇಲಾಖೆಯ ಅಧಿಕಾರಿಗಳು ಪೌರಕಾರ್ಮಿಕರುಗಳಿಗೆ ವೇತನಪತ್ರ ನೀಡಬೇಕು ಎಂದು ಹೇಳಿದರು.
ಮ್ಯಾನ್ಯುವಲ್ ಸ್ಕ್ಯಾವೆಂಜರ್ ಅವಲಂಬಿತರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಬಹುದು. ಅವರ ಅವಲಂಬಿತರು ಅದೇ ರೀತಿಯಲ್ಲಿ ನಿಗಮಗಳಿಂದ 90% ಯೋಜನೆಗಳ ಸಬ್ಸಿಡಿ ನೀಡಲಾಗುವದು. ಗ್ರಾಮ ಪಂಚಾಯತಿ, ನಗರ ಸ್ಥಳೀಯ ಪೌರ ಕಾರ್ಮಿಕರ ಸೋಸೈಟಿ ಮಾಡಬೇಕು ಇದರಿಂದ ಅವರಿಗೆ ಅನೇಕ ಸೌಲಭ್ಯ, ಉದ್ಯೋಗಳ ಸಿಗಲಿದೆ ಇದರಿಂದ ಅವರ ಕುಟುಂಬದ ಆರ್ಥಿಕ ಸಹಾಯ ಸಿಗಲಿದೆ ಸ್ವಾವಲಂಬಿಗಳಾಗಿ ಬದುಕಲು ಸಹಾಯವಾಗಲಿದೆ ಎಂದು ಅವರು ತಿಳಿಸಿದರು.
ಆದಿ ಜಾಂಬವ ಅಭಿವೃಧ್ದಿ ನಿಗಮದಿಂದ 261 ಫಲಾನುಭವಿಗಳಿಗೆ ಈಗಾಗಲೇ ಆಯ್ಕೆ ಮಾಡಿ ಅರ್ಜಿಗಳನ್ನು ಕಳುಹಿಸಿ ಕೊಡಲಾಗಿದೆ. ಉಚಿತ ಭೂಮಿ ನೀಡುವ ಕುರಿತು ಜಾಗೃತಿ ಮೂಡಿಸಬೇಕು.
ಅರ್ಜಿ ಆಹ್ವಾನಿಸಿ, ಸೌಲಭ್ಯಗಳು ಅವರಿಗೆ ತಲುಪುವಂತೆ ಜಾಗೃತಿ ನೀಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬೇಕು. ಪೌರಕಾರ್ಮಿಕರಿಗೆ ಸಮವಸ್ತ್ರ, ಶೂ, ಗ್ಲೌಸ್ ಸೇರಿದಂತೆ ಸೇಫ್ಟಿ ಸಾಮಗ್ರಿಗಳನ್ನು ಒಂದು ವಾರದಲ್ಲಿ ಗುಣಮಟ್ಟದ ಕಿಟ್ ನೀಡಲು ಸೂಚನೆ ನೀಡಿದರು. ಸರ್ಕಾರದ ಅನುದಾನ ಬಳಸಿಕೊಂಡು ನೀಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವಲಂಬಿತರ ಮಕ್ಕಳಿಗೆ ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರವೇಶ ನೀಡಬೇಕು. ಅಧಿಕಾರಿಗಳು ಸಮೀಕ್ಷೆ ನಡೆಸಿ ಪಟ್ಟಿ ಮಾಡಬೇಕು ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಅಲ್ಪೋಪಾಹಾರ, ಊಟ ನೀಡುವ ಬದಲಿಗೆ ಅವರಿಗೆ ಹಣ ನೀಡಬಾರದು ಇದರಿಂದ ಅವರಿಗೆ ಪ್ರತಿ ದಿನ 35 ರೂಪಾಯಿ ಹಾಗೂ ಮೊಟ್ಟೆ ನೀಡಲು ತಿಳಿಸಿದರು.
ಪೌರಕಾರ್ಮಿಕರ ವಿಶ್ರಾಂತಿಗೃಹಗಳನ್ನು ನಿರ್ಮಿಸಬೇಕು. ನಿರಂತರ ಕೆಲಸದಿಂದ ಅವರು ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಇದರಿಂದ ಅನುಕೂಲ ಆಗಲಿದೆ. ಖಾಲಿ ಇರುವ ಸಮುದಾಯ ಭವನಗಳನ್ನು ಕೂಡ ಇದಕ್ಕಾಗಿ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಮಹಾನಗರ ಪಾಲಿಕೆಯ ವತಿಯಿಂದ ವಿನೂತನವಾಗಿ ಸಬ್ಸಿಡಿ ದ್ವಿಚಕ್ರ ವಾಹನ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನಿಗಮಗಳ ಸಹಯೋಗದೊಂದಿಗೆ ಗುರಿ ನಿಗದಿ ಪಡಿಸಿ ವಿವಿಧ ವರ್ಗಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ ತಿಳಿಸಿದರು.
ಪೌರ ಕಾರ್ಮಿಕರಿಗೆ ಅರ್ಜಿ ಆಹ್ವಾನಿಸಿ ಅವರಿಗೆ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಫಾಯಿ ಕರ್ಮಚಾರಿ ಅವರ ನಿಗಮದಿಂದ ಅನೇಕರಿಗೆ ಸೌಲಭ್ಯ ಸಿಗಬೇಕಾಗಿದೆ. ನಿಗಮ, ಪಾಲಿಕೆ, ಸ್ಥಳಿಯಾಡಳಿತಗಳಿಂದ ವಿವಿಧ ಸೌಲಭ್ಯಗಳು ಸಿಗಬೇಕಿದೆ. ಅದೇ ರೀತಿಯಲ್ಲಿ ಪೌರಕಾರ್ಮಿಕರಿಗೆ ಗುರುತಿನ ಚೀಟಿ ಈ ವರೆಗೂ ನೀಡಿಲ್ಲ ತಕ್ಷಣ ಗುರುತಿನ ಚೀಟಿ ನೀಡಬೇಕು ಎಂದು ಜಾಗೃತಿ ಸಮಿತಿ ಸದಸ್ಯ ವಿಜಯ ಹಿರಿಕಟ್ಟಿ ಮನವಿ ಮಾಡಿಕೊಂಡರು.
ರಾಜ್ಯ ಮಟ್ಟದಲ್ಲಿ ಸಭೆ ಆಯೋಜಿಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ಅವರು ತಿಳಿಸಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಜಾಗೃತಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅದೇ ರೀತಿಯಲ್ಲಿ ಗ್ರಾಮ ಪಂಚಾಯತಿ, ಸ್ಥಳೀಯ ಸಂಸ್ಥೆಗಳು ಮಟ್ಟದಲ್ಲಿ ಸುಧಾರಣೆ ಆಗಬೇಕು ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ದೇಶನದಂತೆ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಸೂಚನೆ:
ಸರ್ಕಾರದ ಸೌಲಭ್ಯಗಳು ಪೌರ ಕಾರ್ಮಿಕರಿಗೆ ಸಿಗುವಂತೆ ಎಲ್ಲರೂ ಕೆಲಸ ಮಾಡಬೇಕು. ಇತರೆ ಜಿಲ್ಲೆಯಲ್ಲಿ ಸಾಕಷ್ಟು ಸೌಲಭ್ಯಗಳು ಅವರಿಗೆ ಸಿಗುತ್ತಿವೆ ಜಿಲ್ಲಾವಾರು ಗುರಿ ನಿಗದಿ ಪಡಿಸಿ ಅಭಿವೃದ್ಧಿ ಪರ ಕೆಲಸ ಮಾಡಬೇಕು ಎಂದು ಅಧ್ಯಕ್ಷರು ನಿರ್ದೇಶನ ನೀಡಿದರು.
ಮಹಿಳಾ ಪೌರ ಕಾರ್ಮಿಕರಿಗೆ ಮತ್ತು ಅವರ ಮನೆಯವರಿಗೆ ಸ್ಯಾನಿಟೈಸರ್ ನ್ಯಾಪ್ಕಿನ್ ವಿತರಣೆ ಮಾಡಬೇಕು. ಆರೋಗ್ಯ ದೃಷ್ಟಿಯಿಂದ ಎಲ್ಲರಿಗೂ ಆರೋಗ್ಯಯುತ ಆಹಾರ ಕಿಟ್ ವಿತರಣೆ ಮಾಡಬೇಕು ಎಂದು ತಿಳಿಸಿದರು. ಎಲ್ಲಾ ಪೌರ ಕಾರ್ಮಿಕರರು ಸಮವಸ್ತ್ರ, ಸುರಕ್ಷತಾ ಪರಿಕರಗಳನ್ನು ಬಳಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಟೆಂಡರ್ ಮೂಲಕ ಕೆಲಸ ಮಾಡುವ ಪೌರಕಾರ್ಮಿಕರ ಮಾನವ ಸಂಪನ್ಮೂಲ ಪೂರೈಕೆಯ ಟೆಂಡರ್ ಪಡೆದವರು ಹೊರಗುತ್ತಿಗೆ ಸಿಬ್ಬಂದಿಯ ಇಎಸ್‍ಐ, ಪಿಎಫ್ ಕಡ್ಡಾಯವಾಗಿ ಪ್ರತಿ ತಿಂಗಳು ಪಾವತಿಸಬೇಕು. ಇವುಗಳನ್ನು ಪಾವತಿಸದ ಗುತ್ತಿಗೆದಾರನ ನೋಟಿಸ್ ನೀಡಬೇಕು ಮತ್ತು ಯಾವುದೇ ಟೆಂಡರ್ ಮೂಲಕ ಭಾಗವಹಿಸದಂತೆ ನೋಟಿಸ್ ಜಾರಿ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಸತಿ ಹಕ್ಕುಪತ್ರ ವಿತರಣೆ:
ಪೌರ ಕಾರ್ಮಿಕರಿಗೆ ಸಭೆಯಲ್ಲಿ ಸಾಂಕೇತಿಕವಾಗಿ ವಸತಿ ಹಕ್ಕುಪತ್ರ ಹಾಗೂ ಪೇಮೆಂಟ್ ವೇಜಸ್ ನೀಡಿ ಪೆÇ್ರೀತ್ಸಾಹಿಸಲಾಯಿತು. ಜೊತೆಗೆ ಇನ್ನೀತರ ಮೂಲಭೂತ ಸೌಲಭ್ಯಗಳನ್ನೂ ಶೀಘ್ರದಲ್ಲಿ ಕೊಡಲಾಗುವುದು ಎಂದು ಆಯೋಗದ ಅಧ್ಯಕ್ಷರು, ನಿಗಮದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಭರವಸೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ರಾಜ್ಯಮಟ್ಟದ ಕಾರ್ಯದರ್ಶಿಗಳಾದ ಚಂದ್ರಕಲಾ, ರಾಜ್ಯ ಸಫಾಯಿ ಕರ್ಮಚಾರಿಗಳ ನಿಮಗದ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದರ್ಶನ್ ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ರವೀಂದ್ರ ಗಡಾದಿ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕರಾದ ಈಶ್ವರ ಉಳ್ಳಾಗಡ್ಡಿ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy