ತುಮಕೂರು:75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ತುಮಕೂರು ವತಿಯಿಂದ ಕಾಲೇಜು ಹಂತದ ಚಿತ್ರಕಲಾ ಸ್ಪರ್ಧೆ—2022 ಪೈಂಟಿಂಗ್ ಹಾಗೂ ಪೋಸ್ಟರ್ ವರ್ಣ ಚಿತ್ರ ರಚನಾ ಸ್ಪರ್ಧೆಯನ್ನು ಸೋಮವಾರ ಆಯೋಜಿಸಲಾಗಿತ್ತು.
ತುಮಕೂರು ಜಿಲ್ಲಾ ಸ್ವಾತಂತ್ರ ಹೋರಾಟಗಾರರ ಸಂಘದ ಕಾರ್ಯದರ್ಶಿ ತು.ಮ.ಬಸವರಾಜು ಅವರು ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ತುಮಕೂರು ಜಿಲ್ಲೆಯಾದ್ಯಂತ ಹಲವಾರು ಗ್ರಾಮೀಣ ಭಾಗಗಳಲ್ಲೂ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಈಗ ಅವರಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಬದುಕಿದ್ದಾರೆ. ಅವರೆಲ್ಲರ ದೇಶಾಭಿಮಾನ, ತ್ಯಾಗ ಬಲಿದಾನಗಳನ್ನು ಹಾಗೂ ಅವರ ಜೀವನ ಚರಿತ್ರೆಗಳನ್ನು ಇಂದಿನ ಯುವ ಜನತೆಗೆ ಪರಿಚಯಿಸಬೇಕು. ಈ ಮೂಲಕ ಅವರ ಸೇವೆಗಳನ್ನು ಗೌರವಿಸಿ ಸ್ಮರಿಸುತ್ತಿರಬೇಕು. ಆಗ ಅವರ ಆತ್ಮಕ್ಕೆ ಸ್ವಲ್ಪವಾದರೂ ಸಮಾಧಾನ ನೀಡಿದಂತಾಗುತ್ತದೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಚಿತ್ರಕಲಾ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ನಮ್ಮತುಮಕೂರು ಮಾಧ್ಯಮದ ಪ್ರಧಾನ ಸಂಪಾದಕರಾದ ಜಿ.ಎಲ್.ನಟರಾಜು ಮಾತನಾಡಿ, ಈ ಕಾಲೇಜಿನ ಉಳಿವು ಮತ್ತು ಬೆಳವಣಿಗೆಗಾಗಿ ನಮ್ಮ ಸಂಘ ಸದಾ ಬೆನ್ನೆಲುಬಾಗಿ ನಿಂತು ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಕಾಲೇಜನ್ನು ಉಳಿಸಿಕೊಳ್ಳಲು ನಾವು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಇದೇ ಸ್ಥಳದಲ್ಲಿ ಕಾಲೇಜು ಮುಂದುವರಿಯಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಬಾರಕೇರ ಮಾತನಾಡಿ, ಈ ಕಾಲೇಜಿನ ಕುಂದುಕೊರತೆಗಳು, ಕೆಲಸ ಕಾರ್ಯಗಳಲ್ಲಿ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ತನು, ಮನ, ಧನಗಳಿಂದ ಶ್ರಮಿಸುತ್ತಿರುವುದು ನನಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಅವರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರನ್ನು ಅತಿಥಿ ಉಪನ್ಯಾಸಕರಾದ ಎಂ.ಎನ್.ಸುಬ್ರಹ್ಮಣ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಉಪನ್ಯಾಸಕರಾದ ರೂಪ ಸಿ.ಎನ್., ನೇತ್ರಮ್ಮ ಎಸ್.ಕೆ., ನಾಗರಾಜ್ ಟಿ.ಎಂ., ಸತ್ಯನಾರಾಯಣ ಟಿ.ಎಸ್. ಭಾಗವಹಿಸಿದ್ದರು.
ಶ್ರೀವಿದ್ಯಾ ಟಿ.ಎಸ್. ಪ್ರಾರ್ಥನಾ ಗೀತೆ ಹಾಡಿದರು. ಧನುಶ್ ಎಸ್ ಮತ್ತು ಸೌಮ್ಯ ಎಸ್. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು ಭಾಗವಹಿಸಿ ಸುಂದರ ವರ್ಣ ಚಿತ್ರಗಳನ್ನು ರಚಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz