ಮಧುಗಿರಿ: ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಕ್ರಿಯೆ, ತಿಥಿ ಕಾರ್ಯ ಎಲ್ಲವೂ ಮುಗಿದ ಬಳಿಕ ವ್ಯಕ್ತಿ ದಿಢೀರ್ ಆಗಿ ಪ್ರತ್ಯಕ್ಷವಾಗಿ ಎಲ್ಲರಿಗೂ ಬಿಗ್ ಶಾಕ್ ನೀಡಿದ್ದಾರೆ. ತುಮಕೂರಿನ ಮಧುಗಿರಿ ತಾಲೂಕಿನ ಕೊಡಿಗೇನ ಹಳ್ಳಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿರುವ ಪ್ರೇಮಲತಾ ಅವರ ತಂದೆ ನಾಗರಾಜಪ್ಪ ಕಳೆದ 12 ವರ್ಷಗಳ ಹಿಂದೆ ಚಿಕ್ಕಮಾಲೂರನ್ನು ತೊರೆದು ಯಾರಿಗೂ ಹೇಳದೆ ಹೋಗಿದ್ದರು. ಬಳಿಕ 3 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವಾಸವಿರುವ ನಾಗರಾಜಪ್ಪನ ಎರಡನೇ ಮಗಳಾದ ನೇತ್ರಾವತಿಯ ಮನೆಗೆ ಹೋಗಿದ್ದರು ಎನ್ನಲಾಗಿದೆ.
ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನರ್ಸ್ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ನೇತ್ರಾವತಿ ಅಂದಿನಿಂದಲೂ ತಂದೆ ನಾಗರಾಜಪ್ಪನನ್ನ ನೋಡಿಕೊಳ್ಳುತ್ತಿದ್ದರು. ಮಗಳು ಕೆಲಸ ಮಾಡುತ್ತಿದ್ದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲೇ ನಾಗರಾಜಪ್ಪ ಸಹ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಮೂರು ತಿಂಗಳ ಹಿಂದೆ ಇದ್ದಕ್ಕಿದಂತೆ ನಾಗರಾಜಪ್ಪ ನಾಪತ್ತೆಯಾಗಿದ್ದು, ಸಾಕಷ್ಟು ಹುಡುಕಾಡಿದರೂ ಸಿಕ್ಕಿರಲಿಲ್ಲ. ಆದರೆ, ಕಾಣೆಯಾದ 8 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 18 ರಂದು ಸೆಂಟ್ ಜಾನ್ಸ್ ಆಸ್ಪತ್ರೆಯ ಕಾಂಪೌಂಡ್ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಆಸ್ಪತ್ರೆಯ ಸಿಬ್ಬಂದಿ ನೇತ್ರಾವತಿಗೆ ಈ ವಿಷಯ ತಿಳಿಸಿದ್ದು, ನಾಗರಾಜಪ್ಪನೇ ಸಾವನ್ನಪ್ಪಿರ ಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ನಾಗರಾಜಪ್ಪರ ರೀತಿಯಲ್ಲೇ ಹೋಲಿಕೆ ಇದ್ದ ಕಾರಣ ನೇತ್ರಾವತಿ ಸಹ ಶವ ತನ್ನ ತಂದೆಯದ್ದೇ ಎಂದು ಒಪ್ಪಿ, ಕಾನೂನು ರೀತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಮರಣ್ಣೋತ್ತರ ಪರೀಕ್ಷೆ ನಡೆಸಿ ಬಳಿಕ ಚಿಕ್ಕಮಾಲೂರಿಗೆ ಶವ ತಂದು ಸ್ಮಶಾನದಲ್ಲಿ ಸಂಸ್ಕಾರ ಮಾಡಿದ್ದಾರೆ ಎಂದು ವರದಿಯಾಗಿದೆ.
ಅಂತ್ಯಕ್ರಿಯೆ ತಿಥಿ ಕಾರ್ಯ ಎಲ್ಲವೂ ಮುಗಿದ ಬಳಿಕ ಇಂದು ಬೆಳಗ್ಗೆ ನಾಗರಾಜಪ್ಪ ಚಿಕ್ಕಮಾಲೂರಿಗೆ ಬಂದಿದ್ದು, ನಾಗರಾಜಪ್ಪರನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದು, ಸತ್ತ ವ್ಯಕ್ತಿ ಹೇಗೆ ಜೀವಂತವಾಗಿ ಇಲ್ಲಿಗೆ ಬಂದ ಎಂದು ಗಾಬರಿಗೊಳಗಾಗಿದ್ದಾರೆ.
ಕುಡಿತದ ಚಟಕ್ಕೆ ದಾಸನಾಗಿದ್ದ ನಾಗರಾಜಪ್ಪ, ಈ ಹಿಂದಿನಿಂದಲೂ ಹೆಚ್ಚಾಗಿ ಮಾನಸಿಕ ಅಸ್ವಸ್ಥನ ರೀತಿ ವರ್ತಿಸುತ್ತಿದ್ದರು. ಮಗಳ ಮನೆಯಿಂದ ಯಾರಿಗೂ ಹೇಳದೇ ಹೋಗಿ ಸಿಕ್ಕ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಮೂರು ತಿಂಗಳು ಬೇರೆ ಬೇರೆ ಊರುಗಳಲ್ಲಿ ತಿರುಗಾಡಿದ್ದು, ಬಳಿಕ ಇಂದು ಊರಿಗೆ ಬರಬೇಕೆಂದುಕೊಂಡು ವಾಪಸ್ ಬಂದಿದ್ದಾರೆ ಎನ್ನಲಾಗಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700