ಮಧುಗಿರಿ : ಜಿಲ್ಲೆಯ ಎಲ್ಲಾ ಹಿರಿಯ ಸಹಕಾರಿಗಳ ಸಹಕಾರದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ನನ್ನ ಗೆಲುವು ಸಾಧ್ಯವಾಯಿತು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ತುಮುಲ್ ಉಪ ಕೇಂದ್ರದ ಕ್ಷೀರಭವನದಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಗೆ ಆಯ್ಕೆಯಾದ ಆರ್.ರಾಜೇಂದ್ರ ರವರಿಗೆ ಅಭಿನಂದನಾ ಕಾರ್ಯಕ್ರಮ, ಡೈರಿ-ಕ್ಯಾಲೆಂಡರ್ ಬಿಡುಗಡೆ ಹಾಗೂ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿಗಳ ಮೂಲಕ ಯುವ ಸಹಕಾರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿರುವುದು ಖುಷಿ ತಂದಿದೆ ಎಂದರು.
ನಮ್ಮ ತಾಲೂಕು ಉಪವಿಭಾಗವಾಗಿದ್ದು, ತುಮುಲ್ ವತಿಯಿಂದ ವಿದ್ಯಾರ್ಥಿನಿಯರ ಹಾಸ್ಟೆಲ್ ನ್ನು ಮಧುಗಿರಿಯಲ್ಲಿ ನಿರ್ಮಿಸಿ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿಕೊಡಬೇಕಾಗಿದೆ ಎಂದ ಅವರು, ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಬದ್ಧವಾಗಿದ್ದೇನೆ. ಜಿಲ್ಲಾ ಬ್ಯಾಂಕ್ ನ ವತಿಯಿಂದ ಹಸು ಸಾಕಾಣಿಕೆಗಾಗಿ 32 ಜನರಿಗೆ 1ಕೋಟಿ 75 ಲಕ್ಷ ರೂ. ಗಳ ಸಾಲ ಮಂಜೂರು ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಪಡೆದು ಮೃತಪಟ್ಟವರಿಗೆ ನೀಡಲಾಗುತ್ತಿದ್ದ 1 ಲಕ್ಷ ರೂ. ಗಳ ಹಣವನ್ನು 2022 ರ ಏಪ್ರಿಲ್ 1 ರಿಂದ ಅನ್ವಯ ವಾಗುವಂತೆ 50 ಸಾವಿರ ರೂ ಗಳನ್ನು ಬ್ಯಾಂಕ್ ನ ಸ್ಥಿತಿಗತಿಗಳನ್ನು ನೋಡಿಕೊಂಡು ಇಳಿಕೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ತುಮುಲ್ ವತಿಯಿಂದ ಸುಮಾರು 61 ಲಕ್ಷ 5 ಸಾವಿರ ರೂ ಗಳ ಚೆಕ್ ಗಳನ್ನು ವಿವಿಧ ಯೋಜನೆಗಳಡಿಯಲ್ಲಿ ಆರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಸುಮಾರು 19 ಕೋಟಿ ಬಟವಾಡೆ ಹಣವನ್ನು ವಾರಕ್ಕೊಮ್ಮೆ ಹಾಲು ಉತ್ಪಾದಕರಿಗೆ ನೇರವಾಗಿ ಅವರ ಖಾತೆಗಳಿಗೆ ಪಾವತಿಸಲಾಗುತ್ತಿದೆ. ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ನವರ ಸಹಕಾರದಿಂದ ನಾನು ಅಧ್ಯಕ್ಷನಾಗಿ ಹೈನುಗಾರರಿಗೆ ಅನೇಕ ರೀತಿಯ ಜನಪರ ಕಾರ್ಯಕ್ರಮಗಳನ್ನು ಅಂದು ಜಾರಿಗೊಳಿಸಿದ್ದು, ಇಂದು ಆ ಕಾರ್ಯಕ್ರಮಗಳಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ಹೈನುಗಾರಿಕೆಯು ಸಹಕಾರ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ. ತಾಲ್ಲೂಕಿನಲ್ಲಿ ಹೆಚ್ಚು ಹೈನುಗಾರರನ್ನು ಒಳಗೊಂಡಿರುವುದರಿಂದ ಡಿಸಿಸಿ ಬ್ಯಾಂಕ್ ನ ಮೂಲಕ ಸಾಲ ಸೌಲಭ್ಯ ಕಲ್ಪಿಸಿಕೊಟ್ಟು ಹೈನುಗಾರರನ್ನು ಆರ್ಥಿಕವಾಗಿ ಸದೃಢರಾಗಿಸಬೇಕೆಂದರು.
ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ರಾಜೇಂದ್ರ ರಾಜಣ್ಣ ರವರು ವಿಧಾನಪರಿಷತ್ ಸದಸ್ಯರಾಗಿ ರೈತರ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ನಮ್ಮ ಸಹಕಾರಿ ಕ್ಷೇತ್ರವನ್ನು ಮತ್ತಷ್ಟೂ ಬಲಪಡಿಸುವ ಆಶಯ ಇದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ರಾಜ್ ಗೋಪಾಲ್, ಪುರಸಭಾ ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ಮಂಜುನಾಥ್ ಆಚಾರ್, ಗರಣಿ ರಾಮಾಂಜಿ, ಮಾಲೀಮರಿಯಪ್ಪ, ಮುಖಂಡರಾದ ಪಿ.ಸಿ.ಕೃಷ್ಣರೆಡ್ಡಿ, ಎಂ.ಜಿ.ಶ್ರೀನಿವಾಸ ಮೂರ್ತಿ, ಚಿಕ್ಕೋಬಳರೆಡ್ಡಿ, ಪಿ.ಟಿ.ಗೋವಿಂದಪ್ಪ, ಆದಿನಾರಾಯಣ ರೆಡ್ಡಿ, ಕೆ.ಪ್ರಕಾಶ್, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಸಾಧಿಕ್, ಹೆಂಜಾರಪ್ಪ, ಶನಿವಾರಂ ರೆಡ್ಡಿ, ಸದಾಶಿವರೆಡ್ಡಿ , ಸೀತಾರಾಂ, ಟಿ.ನರಸಿಂಹಮೂರ್ತಿ ಹಾಗೂ ಡೇರಿಯ ಉಪ ವ್ಯವಸ್ಥಾಪಕ ಬೀರಣ್ಣ, ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ಗಿರೀಶ್, ಧರ್ಮವೀರ್ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತಿತರರು ಇದ್ದರು.
(ಜನಪ್ರತಿನಿಧಿಗಳು ಎಷ್ಟೇ ಸಮಾಜ ಸೇವೆ ಮಾಡಿದರೂ ಚುನಾವಣಾ ಸಂದರ್ಭದಲ್ಲಿ ಹಣ ಹಂಚಿ ಗೆಲ್ಲುವ ವಾತಾವರಣ ಸೃಷ್ಠಿಯಾಗಿದ್ದು, ಇಂತಹ ವ್ಯವಸ್ಥೆ ನಿರ್ಮಾಣವಾಗಿರುವುದು ದುರಾಧೃಷ್ಟಕರ. ಉತ್ತಮ ಜನಸೇವಕರನ್ನು ಜನರೇ ಆಯ್ಕೆ ಮಾಡಿಕೊಳ್ಳುವಂತಹ ಕಾಲ ಬರಬೇಕು.)
– ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy