ತುಮಕೂರು: ನವೋದಯದ ಮಹಾನ್ ವ್ಯಕ್ತಿತ್ವ ಸಾವಿತ್ರಿಬಾಯಿ ಅವರ 195 ನೇ ಜನ್ಮದಿನವನ್ನು ಇಂದು ತುಮಕೂರಿನ ವಿವಿಧ ಮೈದಾನ, ಶಾಲಾ ಕಾಲೇಜುಗಳಲ್ಲಿ, ಹಾಸ್ಟೆಲ್ ಹಾಗೂ ಬಡಾವಣೆಗಳಲ್ಲಿ ಪ್ರತಿರೋಧ ದಿನವನ್ನಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಕೇವಲ ಶಾಲೆಯನ್ನು ತೆರೆಯಲಿಲ್ಲ. ಬದಲಾಗಿ ಸಾವಿರಾರು ವರ್ಷಗಳ ಶೋಷಣೆ ವಿರುದ್ಧ ಕೇವಲ ಒಂದು ಪುಸ್ತಕ ಮತ್ತು ಎದೆಯ ತುಂಬಾ ಧೈರ್ಯವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಯುದ್ಧವನ್ನೇ ಸಾರಿದರು. ಅವರು ಪುಣೆಯ ಬೀಡೆವಾಡ ಶಾಲೆಗೆ ನಡೆದುಕೊಂಡು ಹೋಗುವಾಗ ಜನ ಅವರಿಗೆ ಕೆಸರು, ಸಗಣಿ ಮತ್ತು ಕಲ್ಲುಗಳನ್ನ ಎಸೆದಿದ್ದಾರೆ, ಆದರೆ ಅವರು ಯಾವುದೇ ಅವಮಾನಕ್ಕೆ ಹಿಂಜರಿಯದೆ ಅಂದು ಹೆಣ್ಣುಮಕ್ಕಳ ಹಾಗೂ ಕೆಳ ವರ್ಗದ ಮಕ್ಕಳಿಗಾಗಿ ಶಾಲೆಗಳನ್ನು ತೆರೆದರು. ಜೊತೆಗೆ ಅಂದಿನ ಸಮಾಜದಲ್ಲಿದ್ದ ಆಳವಾಗಿ ಬೀರೂರಿದ್ದ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು ಹಾಗೂ ಅನ್ಯ ಜಾತಿಯ ವಿವಾಹವನ್ನು ಬೆಂಬಲಿಸಿ ಸ್ವತಃ ತನ್ನ ಮಗನಿಗೆ ಅನ್ಯ ಜಾತಿ ವಿವಾಹವನ್ನು ಮಾಡಿಸುವುದರ ಮೂಲಕ ಸಮಾಜದಲ್ಲಿ ಜಾತಿ ವ್ಯವಸ್ಥೆ, ಮೂಢನಂಬಿಕೆ, ಹಳೆ ಕಂದಾಚಾರಗಳನ್ನು ತೊಲಗಿಸಲು ಅದರ ವಿರುದ್ಧ ಸಿಡಿದೆದ್ದರು ಎಂದರು.
ಆದರೆ ರಾಜ್ಯದಲ್ಲಿ ಇತ್ತೀಚಿಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಿರುವುದು ಬಹಳ ವಿಷಾದದ ಸಂಗತಿ. ಸರ್ಕಾರಗಳು ಇಂದು ಮಹಿಳೆಯರ ಭದ್ರತೆಯ ಕುರಿತು ಮೌಖಿಕವಾಗಿ ಮಾತನಾಡುತ್ತಿವೆಯೇ ಹೊರತು, ಅದನ್ನು ತಡೆಗಟ್ಟುವಲ್ಲಿ ಕಾರ್ಯಕ್ಷಮತೆಯನ್ನು ತೋರುತ್ತಿಲ್ಲ. ಇದಲ್ಲದೇ, ಇತ್ತೀಚಿಗೆ ಮರ್ಯಾದೆ ಹೀನ ಹತ್ಯೆಗಳು ಸಹ ಹೆಚ್ಚುತ್ತಿವೆ. ಜಾತಿ–ಧರ್ಮಗಳ ಹೆಸರಿನಲ್ಲಿ ಜನರ ಮಧ್ಯೆ ಭೇದ ಭಾವವನ್ನು ಮೂಡಿಸಿ, ಅವರನ್ನು ಕತ್ತಲಿನಲ್ಲಿಟ್ಟು, ತಮ್ಮ ರಾಜಕೀಯ ಉದ್ದೇಶಗಳಿಗೆ ಜನಗಳನ್ನು ಬಲಿಕೊಡುತ್ತಿರುವ ಪ್ರಸಂಗಗಳು ಹೆಚ್ಚುತ್ತಿವೆ, ಇಂತಹ ಸಂದರ್ಭದಲ್ಲಿ ಶಿಕ್ಷಣವು ಮಹತ್ತರ ಪಾತ್ರವನ್ನು ವಹಿಸಬೇಕಿದೆ. ವಿಪರ್ಯಾಸವೆಂದರೆ, ರಾಜ್ಯ ಸರ್ಕಾರವೇ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿವೆ. ಈ ಮೂಲಕ ಬಡ ಕೃಷಿ-ಕಾರ್ಮಿಕರ, ದೀನ–ದಲಿತರನ್ನು ಶಿಕ್ಷಣದಿಂದ ಶಾಲಾ ಹಂತದಲ್ಲಿಯೇ ಹೊರಗುಳಿಯುವಂತೆ ನೀತಿಯನ್ನು ರೂಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಬಡ ಜನರು, ಮಹಿಳೆಯರ ಪರವಾಗಿ ಶ್ರಮಿಸಿದ ನವೋದಯದ ಮಹಾನ್ ವ್ಯಕ್ತಿತ್ವ ಸಾವಿತ್ರಿಬಾಯಿ ಫುಲೆ ರವರ ಜನ್ಮ ದಿನದ ಹಿನ್ನಲೆಯಲ್ಲಿ ಅವರ ಆಶಯಗಳನ್ನು ಸಾಕಾರಗೊಳಿಸುವಂತೆ ಚಳುವಳಿಯನ್ನು ಕಟ್ಟಿ ಬೆಳೆಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಪದಾಧಿಕಾರಿಗಳಾದ ಭರತ್, ಹುಸೇನಪ್ಪ, ಭೂತೇಶ್ ಹಾಗೂ ವಿದ್ಯಾರ್ಥಿಗಳು ಮತ್ತು ಜನರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


