ತುಮಕೂರು: ರಾಜ್ಯ ಸರ್ಕಾರ ರಸಾಯನ ಹಂಚಿದಂತೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಹಂಚಿಕೆ ಮಾಡಿದ್ದು, ರೋಸ್ಟರ್ ಬಿಂದು ಹಂಚಿಕೆಯೂ ಸಮಾಧಾನ ತಂದಿಲ್ಲ ಎಂದು ಮಾಜಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿದರು.
ತುಮಕೂರು ವಿವಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಒಳಮೀಸಲು ಸಮಿತಿ ಅಧ್ಯಕ್ಷನಾಗಿ ಹೈಕೋರ್ಟ್ ಅಭಿಪ್ರಾಯದಂತೆ ಜನಸಂಖ್ಯೆ ಆಧಾರದಲ್ಲಿ ಮೀಸಲು ನಿಗದಿ ಮಾಡಿದ್ದೇವು. ಅತ್ಯಂತ ಅವಕಾಶವಂಚಿತ ಅಲೆಮಾರಿ ಸಮುದಾಯಕ್ಕೂ ಶೇ 1ರಷ್ಟು ಮೀಸಲು ದೊರೆಯುವಂತೆ ಮಾಡಿದ್ದೇವು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ರಸಾಯನ ಹಂಚಿದ ಹಾಗೆ ಎಬಿಸಿ ಕೆಟಗರಿ ಮಾಡಿ ತಲಾ ಪ್ರತಿಶತ 5.25%, 5.25% ಹಾಗೂ 4.5% ರಷ್ಟು ಮೀಸಲು ಹಂಚಿಕೆ ಮಾಡಿದ್ದು, ರೋಸ್ಟರ್ ಪದ್ಧತಿಯನ್ನು ಸರಿಯಾಗಿ ಮಾಡಿಲ್ಲ. ಇದರಿಂದ ಯಾರಿಗೂ ನ್ಯಾಯ ಸಿಕ್ಕಿಲ್ಲ. ಯಾರಿಗೂ ಸಮಾಧಾನ ಆಗಿಲ್ಲ ಇದು ಕೇವಲ ರಾಜೀ ಸೂತ್ರ ಮಾತ್ರ ಎಂದರು.
ಸರ್ಕಾರದ 3ನೇ ವರ್ಷದ ಸಾಧನಾ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಅವರು ಸರ್ಕಾರದಲ್ಲಿ 2 ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಒಂದು ಕಾರ್ಯಕ್ರಮ, ಮತ್ತೊಂದು ಕಾರ್ಯಯೋಜನೆ. ಆದರೆ ಈ ಸರ್ಕಾರದಲ್ಲಿ ಅಭಿವೃದ್ಧಿ ಯೋಜನೆಗಳೇ ಇಲ್ಲ. ದೂರದೃಷ್ಟಿಯ ಯೋಜನೆಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. 2 ಸಾವಿರ ಕೋಟಿ ನಾವು ನುಡಿದಂತೆ ನಡೆದಿದ್ದೇವೆ ಅಂದರೆ ಆಗುತ್ತಾ, ಅಭಿವೃದ್ಧಿ ಕೆಲಸ ಆಗಬೇಡವಾ. ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದಾಗ ಹಿಂದೆ ಮಾಡಿದ ವಿತ್ತೀಯ ಕೊರತೆ ಮಿತಿ ಕಾನೂನನ್ನೇ ಅವರೇ ಗಾಳಿಗೆ ತೂರಿದ್ದಾರೆ. ರಾಜ್ಯದ ಸಾಲ 7 ಲಕ್ಷ ಕೋಟಿಗೆ ಏರಿಕೆಯಾಗಿದೆ. ಸಿದ್ದರಾಮಯ್ಯ ಮೊದಲಿನ ಧರ ಇಲ್ಲ, ಆರ್ಥಿಕ ಶಿಸ್ತನ್ನು ಪಾಲಿಸಲಿ ಎಂದರು.
ಸಿದ್ದರಾಮಯ್ಯ ಅವರು 5 ವರ್ಷ ನಾನೇ ಸಿಎಂ ಅನ್ನುತ್ತಿದ್ದು, ಅವರೇ ಮುಂದುವರಿಯಬಹುದು ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಅವರು ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆದ ಹಿನ್ನೆಲೆಯಲ್ಲಿ ಮರುಪರೀಕ್ಷೆ ಘೋಷಿಸಿರುವುದು ಪ್ರತಿಭಾವಂತ ವಿದ್ಯಾರ್ಥಿಗಳ ದೃಷ್ಟಿಯಿಂದ ಸರಿಯಾದ ಕ್ರಮ ಹೊರತು ತಪ್ಪಲ್ಲ. ನೀಟ್ ಎಂಬುದು ಅರ್ಥಮಾಡಿಕೊಂಡು ಬರೆಯುವ ಪರೀಕ್ಷೆ ಯಾವಾಗ ಪರೀಕ್ಷೆ ಮಾಡಿದರೇನು. ಇದಕ್ಕೆ ವ್ಯವಸ್ಥೆಯೇ ಹೊಣೆ ಎಂದರು.
ನಾನು ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ, ಗ್ಯಾರಂಟಿ ಎಂದ ಮಾಧುಸ್ವಾಮಿ ಅವರು ಚುನಾವಣಾ ಆಯೋಗದಲ್ಲಿ ಇಂತಹ ಪಾರ್ಟಿಯಿಂದಲೇ ಸ್ಪರ್ಧಿಸಬೇಕೆಂಬ ನಿಯಮವಿಲ್ಲ. ನಾನು ಸೋತಿರಬಹುದು. ಆದರೆ ಕಾರ್ಯಕರ್ತರ ಜೊತೆಯಲ್ಲಿ ನಿರಂತರವಾಗಿದ್ದೇನೆ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಚುನಾವಣೆಗಳಲ್ಲಿ ಭಾಗಿಯಾಗುತ್ತಿರುವ ಏಕೈಕ ಪರಾಜಿತ ಅಭ್ಯರ್ಥಿ ನಾನೇ ಎಂದರು.
ಕ್ಲಿಷ್ಟ ಪರಿಸ್ಥಿತಿಯಲ್ಲಿ ದೇಶದ ಹಿತದೃಷ್ಟಿಯಿಂದ ಪ್ರಧಾನಿಯವರು ದೇಶದ ಜನತೆಗೆ ಮಿತವ್ಯಯ ಜೀವನದ ಸೂತ್ರವನ್ನು ಪಾಲಿಸಲು ಕರೆ, ಮನವಿ ಮಾಡಿದ್ದಾರೆಯೇ ಹೊರತು, ಕಡ್ಡಾಯ ಮಾಡಿಲ್ಲ. ದೇಶದಲ್ಲಿ ಫಾರಿನ್ ಎಕ್ಸ್‌ಚೇಂಜ್ ಹೆಚ್ಚಾದರೆ ಆರ್ಥಿಕ ಕುಂಠಿತವಾಗುತ್ತದೆ ಎನ್ನುವ ಕಾರಣಕ್ಕೆ ಒಂದು ವರ್ಷ ಬಿಟ್ಟು ಚಿನ್ನ ಖರೀದಿ ಮಾಡಿ ಅಂದಿದ್ದಾರೆ. ದೇಶದ ಪ್ರಧಾನಿಯಾಗಿ ಕರೆಕೊಟ್ಟಿದ್ದಾರೆ. ಅದರಲ್ಲಿ ಚರ್ಚೆ ಮಾಡುವುದೇನಿದೆ ಎಂದು ವಿಪಕ್ಷ ಕಾಂಗ್ರೆಸ್ ಟೀಕೆಗೆ ಟಾಂಗ್ ಕೊಟ್ಟರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


