ಆಧುನಿಕ ತಂತ್ರಜ್ಞಾನ ಬಳಸಿ ಆನ್ ಲೈನ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಆಮಿಷಗಳನ್ನು ಒಡ್ಡಿ ವಂಚನೆ ಮಾಡುತ್ತಿರುವ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಮುಂಜಾಗ್ರತೆ ವಹಿಸುವ ಮೂಲಕ ವಂಚನೆಗೊಳಗಾಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಮ ಅಮಟೆ ತಿಳಿಸಿದರು.
ಅವರು ಇಂದು ಚಿಕ್ಕಮಗಳೂರು ಪ್ರಸ್‌ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ವಿದ್ಯಾವಂತ ಸುಶಿಕ್ಷಿತರೇ ಹೆಚ್ಚು ವಂಚನೆಗೊಳಗಾಗುತ್ತಿದ್ದಾರೆ, ದೊಡ್ಡ ಜಾಲವನ್ನು ಹೊಂದಿರುವ ವಂಚಕರ ಜಾಲವು ಇಲ್ಲಸಲ್ಲದ ಆಮಿಷ ಒಡ್ಡಿ ವಿವಿಧ ರೀತಿಯಲ್ಲಿ ವಂಚನೆ ಮಾಡುತ್ತಿದ್ದು, ಯಾರೂ ಕೂಡ ಅಪರಿಚಿತರೊಂದಿಗೆ ತಮ್ಮ ವಯಕ್ತಿಕ ಮಾಹಿತಿಗಳನ್ನು ನೀಡಬಾರದು ಎಂದು ಮನವಿ ಮಾಡಿದರು.
ಮೂರು ಪ್ರಕರಣಗಳಲ್ಲಿ ಸೈಬರ್ ಅಪರಾಧಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ವೈರಲ್ ಮಾಡಿ ಬ್ಲಾಕ್‌ಮೇಲ್ ರೂಪದಲ್ಲಿ ವಂಚನೆ ಮಾಡಲಾಗುತ್ತಿದೆ. ಬ್ಯಾಂಕ್ ಹಾಗೂ ಇತರ ವ್ಯವಹಾರಗಳಲ್ಲಿ ವಯಕ್ತಿಕ ಮಾಹಿತಿ ಪಡೆದುಕೊಂಡು ತಂತ್ರಜ್ಞಾನ ಬಳಸಿ ಹಣ ಅಪಹರಿಸುವ ಮೂಲಕ ವಂಚನೆ ಮಾಡಲಾಗುತ್ತಿದೆ, ಡಿಜಿಟಲ್ ಅರೆಸ್ಟ್ ಎಂಬ ಸುಳ್ಳು ಮಾಹಿತಿ ನೀಡಿ ಹಣ ಸುಲಿಗೆ ಮಾಡಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರವಹಿಸಬೇಕಾಗಿದೆ ಎಂದರು.
2೦೦3ರಲ್ಲಿ ಮಾಹಿತಿ ತಂತ್ರಜ್ಞಾನ ಜಾರಿಗೆ ಬಂದಿದ್ದು, ಅದರ ಆಧಾರದಲ್ಲಿ ರಾಜ್ಯ ಸರ್ಕಾರ ಪ್ರತೀ ಪೊಲೀಸ್ ಠಾಣೆಯಲ್ಲಿ ಇಬ್ಬರಿಗೆ ಸೈಬರ್ ಅಪರಾಧಗಳ ಬಗ್ಗೆ ತರಬೇತಿ ನೀಡಲಾಗಿದೆ. ಪ್ರತೀ ಜಿಲ್ಲೆಯಲ್ಲಿ ಸೈಬರ್ ಅಪರಾಧಕ್ಕಾಗಿಯೇ ಪ್ರತ್ಯೇಕ ಪೊಲೀಸ್ ಠಾಣೆ ತೆರೆಯಲಾಗಿದ್ದು ಡಿವೈಎಸ್‌ಪಿ ಹಂತದ ಅಧಿಕಾರಿಗೆ ತನಿಖಾಧಿಕಾರಿಯಾಗಿ ನಿಯೋಜಿಸಲಾಗಿದೆ, ಇದೀಗ ಸರ್ಕಾರ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಮಟ್ಟದ ಅಧಿಕಾರಿಯನ್ನು ಮೇಲುಸ್ತುವಾರಿಗಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಯಾವುದೇ ವ್ಯಕ್ತಿ ಅಥವಾ ಯಾವುದೇ ಸ್ಥಳದಲ್ಲಿ ಸೈಬರ್ ಅಪರಾಧದಲ್ಲಿ ತೊಂದರೆಗೊಳಗಾದವರು ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ಟ್ರೋಲ್‌ಫ್ರೀ ಮೊಬೈಲ್ ಸಂಖ್ಯೆ ೧೯೩೦ ಯನ್ನು ನಿಗಧಿಪಡಿಸಿದ್ದು, ಯಾವುದೇ ಸ್ಥಳದಿಂದ ಈ ಸಂಖ್ಯೆಗೆ ದೂರವಾಣಿ ಕರೆ ಮಾಡಿದರೆ ಎನ್‌ಸಿಸಿಆರ್‌ಪಿ( ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟ್ ಪೋರ್ಟಲ್) ಇಲ್ಲಿಗೆ ಮಾಹಿತಿ ರವಾನೆಯಾಗಿ ಅಲ್ಲಿಂದ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗಲಿದೆ ಎಂದು ವಿವರಿಸಿದರು.
ಈ ಮಾಹಿತಿ ಆಧರಿಸಿ ಆಯಾ ಪೊಲೀಸ್ ಠಾಣೆಗಳಿಂದ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಅಥವಾ ಸಂಬಂಧಪಟ್ಟ ಜಾಲತಾಣ ಸಂಸ್ಥೆಗಳಿಗೆ ಮಾಹಿತಿ ನೀಡಿ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಬಹುದು ಮತ್ತು ವಂಚನೆ ಜಾಲತಾಣಗಳ ಆಪ್‌ಗಳು ಮೊಬೈಲ್ನ ಸಂಖ್ಯೆಗಳನ್ನು ಬ್ಲಾಕ್‌ಮಾಡುವ ಮೂಲಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದೆಂದು ಹೇಳಿದರು.
ಈ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಸೈಬರ್ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಗವಿರಾಜ್ ಭಾಗವಹಿಸಿದ್ದರು, ಅಧ್ಯಕ್ಷತೆಯನ್ನು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ತಾರಾನಾಥ್ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


