ಸೇವಾದಳ ಕಾಂಗ್ರೆಸ್ ಪಕ್ಷದ ಬೆನ್ನೆಲುಬು, ಸೇವಾದಳ ಬಲಿಷ್ಠವಾದರೆ ಪಕ್ಷ ಬಲಿಷ್ಠವಾದಂತೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.
ಗುಬ್ಬಿ ಪಟ್ಟಣದ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ತುಮಕೂರು ಜಿಲ್ಲಾ ಸೇವಾದಳ ಘಟಕದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೇವಾದಳ ಒಂದು ಶಿಸ್ತು ಬದ್ಧ ಸಂಘಟನೆಯಾಗಿದ್ದು, ಸೇವಾದಳದಲ್ಲಿ ಕಾರ್ಯನಿರ್ವಹಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಮುಖ್ಯಮಂತ್ರಿಗಳಾಗಿ ಕೇಂದ್ರ ಮಂತ್ರಿಗಳಾಗಿ ಮಹತ್ತರ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಸೇವಾದಳ ಸಂಘಟನೆಯಾದರೆ ದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದೇಶದಂತೆ ಪದ್ಮಭೂಷಣ ಡಾ ನಾ ಸು ಹರ್ಡಿಕರ್ ಅವರಿಂದ ಈ ಸಂಸ್ಥೆ ಹಿಂದೂಸ್ತಾನಿ ಸೇವಾದಳ ಎಂಬ ಹೆಸರಿನಲ್ಲಿ ಸ್ಥಾಪನೆಯಾಯಿತು. ಇದರ ಪ್ರಥಮ ಅಧ್ಯಕ್ಷರಾಗಿ ಪಂಡಿತ್ ಜವಾಹರಲಾಲ್ ನೆಹರು ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಅಂದಿನಿಂದ ಈ ಸಂಸ್ಥೆ ಮಕ್ಕಳು ಹಾಗೂ ಯುವಜನರಲ್ಲಿ ಗಾಂಧಿ ತತ್ವದ ಆಧಾರದಲ್ಲಿ ಶಿಸ್ತು ಹಾಗೂ ರಾಷ್ಟ್ರೀಯತೆಯನ್ನು ಬೆಳೆಸುವುದರಲ್ಲಿ ಕಾರ್ಯನಿರತವಾಗಿದೆ. ಸಾವಿರಾರು ಶಿಕ್ಷಣ ಶಿಬಿರ ಹಾಗೂ ಸೇವಾ ಶಿಬಿರ, ಭಾವೈಕ್ಯತಾ ರ್ಯಾಲಿ, ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿ ರಾಷ್ಟ್ರೀಯ ಸಂಸ್ಥೆಯಾಗಿ ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದರು.
ಸೇವಾದಳ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಕಡಬ ಶಿವಕುಮಾರ್ ಮಾತನಾಡಿ, ಸೇವಾದಳ ಸಂಘಟನೆ ಶಿಸ್ತು ಬದ್ಧ ಸಂಘಟನೆಯಾಗಿದ್ದು, ರಾಜ್ಯದಲ್ಲಿ ಸೇವಾದಳ ಸಂಘಟನೆಯನ್ನು ಮತ್ತಷ್ಟು ಸಂಘಟಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಸಭೆಯಲ್ಲಿ ಸೇವಾದಳ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣೇಗೌಡ, ಶಿವಪ್ರಸಾದ್, ಕಡಬ ಶಿವಕುಮಾರ್, ಗುಬ್ಬಿ ಸೇವಾದಳ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಹಾಗೂ ಮತ್ತಿತರರು ಭಾಗವಹಿಸಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA