ತುಮಕೂರು: ನಗರದಲ್ಲಿ ಮಾದಕ ವಸ್ತುಗಳನ್ನಾಗಿ ಟೈಡಾಲ್ ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೆಡ್ ಪ್ಲಸ್ ನಲ್ಲಿ ಕೆಲಸ ಮಾಡುತ್ತಿದ್ದ ಭಾನುಪ್ರಕಾಶ್, ಮೆಡಿಕಲ್ ರೆಪ್ರೆಸೆಂಟಿವ್ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಆಟೋ ಪ್ಲಾಸ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ, ಮೊಹಮ್ಮದ್ ಸೈಪ್ , ಸೈಯದ್ ಲುಕ್ಮಾನ್ , ಅಫ್ತಬ್ ಬಿನ್ ಹಮ್ಜು, ಗುರುರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ತುಮಕೂರು ನಗರದ ಹೊಸಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಐ.ಟಿ. ಬಡಾವಣೆ, ರೈಲ್ವೆ ಹಳಿಗಳ ಪಕ್ಕ, ಹಾಗೂ ಉಪ್ಪಾರಹಳ್ಳಿ ಬ್ರೀಡ್ಜ್, ಶ್ರೀದೇವಿ ಕಾಲೇಜುಗಳ ಬಳಿ , ಕೆಲ ಹುಡುಗರು ಮೆಡಿಕಲ್ ಶಾಪ್ ಗಳಲ್ಲಿ ಹೋಗಿ ಸದರಿ ಟೈಡಾಲ್ ಮಾತ್ರೆಗಳನ್ನು ಕೊಡುವಂತೆ ಕೇಳುತ್ತಿದ್ದರು. ಇದರಿಂದ ಪ್ರೇರೇಪಿತರಾದ ತುಮಕೂರು ನಗರದ ಮಧುಗಿರಿ ರಸ್ತೆಯಲ್ಲಿರುವ ಮೆಡ್ ಪ್ಲಸ್ ಮೆಡಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾನು ಪ್ರಕಾಶ್ ಎಂಬುವನು ಮೆಡಿಕಲ್ ಗಳಿಗೆ ಬರುವವರುಗಳಿಗೆ ಟೈಡಾಲ್ ಮಾತ್ರೆಗಳನ್ನು ತಂದುಕೊಡುವಂತೆ ತಿಳಿಸಿದ್ದನು.
ಅದರಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ರಾಘವೇಂದ್ರ ಮಾತ್ರೆಗಳನ್ನು ಯಾವುದೇ ಬಿಲ್ ಗಳಿಲ್ಲದೆ ಅಕ್ರಮವಾಗಿ ಮೊದಲು 345/- ರೂ. ಗೆ ಒಂದು ಶೀಟ್ ನಂತೆ 4 ಶೀಟ್ ಗಳನ್ನು ತಂದು ತಂದುಕೊಟ್ಟಿದ್ದನು. ನಂತರ ಮಾತ್ರೆಗಳಿಗೆ ಬೇಡಿಕೆ ಜಾಸ್ತಿಯಾದ ಕಾರಣ, ಭಾನು ಪ್ರಕಾಶ್ ಮತ್ತು ರಾಘವೇಂದ್ರ ರವರು ಸೇರಿಕೊಂಡು ಸದರಿ ಮಾತ್ರೆಗಳನ್ನು ಅಂಗಡಿಯಲ್ಲಿ ಮಾರಾಟ ಮಾಡದೇ ಯಾರು ಸದರಿ ಮಾತ್ರೆಗಳನ್ನು ಕೇಳಿಕೊಂಡು ಬಂದಂತಹ ಗಿರಾಕಿಗಳಿಗೆ ತನ್ನ ಮೊಬೈಲ್ ನಂಬರ್ ನೀಡಿ, ಶ್ರೀದೇವಿ ಕಾಲೇಜ್ ಬಳಿ, ಇಂಡಸ್ಟ್ರೀಯಲ್ ಏರಿಯಾಗಳಿಗೆ ಕರೆಸಿಕೊಂಡು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ 10 ಮಾತ್ರೆಗಳಿರುವ ಒಂದು ಶೀಟ್ ನ್ನು 800/- ರೂ. ಗಳಿಗೆ ಮಾರಾಟ ಮಾಡುತ್ತಿದ್ದನು.
ನಂತರ ಈ ಹಿಂದೆ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬುವನಿಗೆ ಮೊಬೈಲ್ ನ್ನು ಕೊಡಿಸಿ, ಸದರಿ ನಂಬರ್ ಗೆ ಟೈಡಾಲ್ ಮಾತ್ರೆಗಳನ್ನು ಕೇಳಿಕೊಂಡು ಪೋನ್ ಮಾಡುತ್ತಾರೆ, ಆಗ ಅವರುಗಳನ್ನು ಕರೆದು 800/- ರೂ. ಗೆ 10 ಮಾತ್ರೆಗಳಿರುವ ಶೀಟನ್ನು ಮತ್ತು ಸೀರಂಜ್ ನ್ನು ಮಾರಾಟ ಮಾಡು ಎಂದು ತಿಳಿಸಿದ್ದನು. ಅಭಿಷೇಕ್ ಅದರಂತೆ ಸದರಿ ಮಾತ್ರೆ ಮತ್ತು ಸಿರಿಂಜ್ ಗಳನ್ನು ಒಂದು ಬ್ಯಾಗ್ ನಲ್ಲಿ ಇಟ್ಟುಕೊಂಡು ಭಾನುಪ್ರಕಾಶ್ ರವರು ತರಿಸಿಕೊಡುತಿದ್ದ ಮಾತ್ರೆಗಳನ್ನು ಪೋನ್ ಮಾಡುತ್ತಿದ್ದ ಮೊಹಮ್ಮದ್ ಸೈಪ್, ಸೈಯದ್ ಲುಕ್ಮಾನ್, ಅಫ್ತಬ್, ಗುರುರಾಜ್ ಹೆಚ್.ಎಸ್. ಎಂಬುವರಿಗೆ ಮತ್ತು ಇತರರಿಗೆ ಶಿರಾಗೇಟ್ ಬಳಿ ಮತ್ತು ಇಂಡಸ್ಟ್ರೀಯಲ್ ಏರಿಯಾ ಬಳಿ ಕರೆಸಿಕೊಂಡು ಮಾರಾಟ ಮಾಡುತ್ತಿದ್ದನು.
800/- ರೂ. ಗಳಿಗೆ ತೆಗೆದುಕೊಂಡು ಹೋದ 10 ಮಾತ್ರೆಗಳಿರುವ ಶೀಟ್ ಗಳನ್ನು ಆರೋಪಿಗಳು ಒಂದೊಂದು ಮಾತ್ರೆಗಳನ್ನು ಕವರ್ ಸಮೇತ ಕಟ್ ಮಾಡಿ ಒಂದು ಮಾತ್ರೆಗೆ 100/- ರೂ.ಗಳಿಂದ 200/- ರೂ.ಗಳ ವರೆಗೆ ಮಾರಾಟ ಮಾಡುತ್ತಿದ್ದರು.
ಆಗಾಗ ಆ ಮಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಸದರಿ ಮಾತ್ರೆಗಳ ನೀರು ಶರೀರಕ್ಕೆ ಹೋಗುತ್ತಿದ್ದಂತೆ, ಕಿಕ್ ಹೊಡೆಯುತ್ತದೆ ಮತ್ತು ನಷೆ ಬರುತ್ತದೆಂದು ಈ ಮಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಪ್ರಸ್ತುತ 7 ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರ ಬಳಿ ಇದ್ದ 10,500/- ರೂ ಬೆಲೆ ಬಾಳುವ 300 ಮಾತ್ರೆಗಳನ್ನು ಮತ್ತು ಸೀರಂಜ್ ಗಳನ್ನು, ಮೊಬೈಲ್ ಮತ್ತು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅತಿ ಚಿಕ್ಕ ವಯಸ್ಸಿನ ಮಕ್ಕಳು ಮತ್ತು ವಿದ್ಯಾರ್ಥಿಗಳ ಶರೀರದ ಮೇಲೆ ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುವ ಇಂತಹ ವಿಷದ ಮಾತ್ರೆಗಳನ್ನು ಮಾರಾಟ ಮಾಡಿ ಕೆಟ್ಟ ವಾತಾವರಣವನ್ನುಂಟು ಮಾಡಿದ್ದಾರೆ ಎಂದು ಏಳು ಮಂದಿ ಮೇಲೆ ಹೊಸಬಡಾವಣೆ ಪೊಲೀಸ್ ಠಾಣೆ ಮೊ.ನಂ. 13/2025 ಕಲಂ 123, 278, 280 ರೆ.ವಿ. 3(5) ಬಿ.ಎನ್.ಎಸ್. ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಇನ್ನು ಕೆಲವರನ್ನು ಪತ್ತೆ ಮಾಡಿ ಬಂಧಿಸಬೇಕಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ತುಮಕೂರು ನಗರದಲ್ಲಿ ಇತ್ತೀಚೆಗೆ ಶಾಲಾ, ಕಾಲೇಜುಗಳ ಬಳಿ ಪಾರ್ಕ್ ಗಳ ಬಳಿ ನಿರ್ಜನ ಪ್ರದೇಶಗಳಲ್ಲಿ ಇಂತಹಾ ನಷೆ ಬರಿಸುವ ಮಾತ್ರೆಗಳ ಖಾಲಿ ಕವರ್ ಗಳು, ಸಿಗರೇಟ್ ಫಿಲ್ಟರ್ ಗಳು ಮತ್ತು ಸೀರಿಂಜ್ ಗಳು ಬಿದ್ದಿರುವ ಬಗ್ಗೆ ಮಾಹಿತಿ ಇದ್ದುದ್ದರಿಂದ ತುಮಕೂರು ಜಿಲ್ಲಾ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಕೆ.ಆರ್.ಚಂದ್ರಶೇಖರ್ ರವರ ಹಾಗೂ ತಿಲಕ್ ಪಾರ್ಕ್ ಪೊಲೀಸ್ ವೃತ್ತ ನಿರೀಕ್ಷಕರವರಾದ ಪುರುಷೋತ್ತಮ್ ರವರ ಮಾರ್ಗಸೂಚನೆ ಮೇರೆಗೆ ಹೊಸಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ ಭಾರತಿ ಮತ್ತು ಎ.ಎಸ್.ಐ. ಅಂಜೀನಪ್ಪ ಹಾಗೂ ಠಾಣೆಯ ಸಿಬ್ಬಂದಿಯವರುಗಳಾದ ಮಂಜುನಾಥ್, ಕೆ.ಟಿ. ನಾರಾಯಣ, ತಿಲಕ್ ಪಾರ್ಕ್ ಠಾಣೆಯ ನಿಜಾಮುದ್ದೀನ್ ಷಾ ಹಾಗೂ ಮಧು, ಸುನಿಲ್, ನಧಾಫ್, ಲೋಕಶ್ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಸಹಕರಿಸಿರುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4