ತುಮಕೂರು: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ POCSO ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತುಮಕೂರು ಮಹಿಳಾ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಘಟನೆ ನಡೆದಿದ್ದು, ಬಾಲನ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರ ಹಾಸ್ಟೆಲ್ ನಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ. ಮೇ 24, 2022ರಂದು ರಾತ್ರಿ ಸುಮಾರು 7:30 ಗಂಟೆಗೆ ಬಸವರಾಜ್ ಎಂಬಾತನ ಮೊಬೈಲ್ ಮೂಲಕ ನೊಂದ ಬಾಲಕ ತನ್ನ ತಂದೆಗೆ ಕರೆ ಮಾಡಿದ್ದ. ಬಳಿಕ ಬಸವರಾಜು ಬಾಲಕನಿಗೆ ಕುರ್ ಕುರೆ ಮತ್ತು ಚಿಕನ್ ಕೊಡಿಸುವುದಾಗಿ ಕರೆದೊಯ್ದು ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ.
ಬಾಲಕ ಬಳಿಕ ತನಗೆ ಅನಾರೋಗ್ಯ ಎಂದು ಊರಿಗೆ ಬಂದಿದ್ದು, ಆತನ ಆರೋಗ್ಯ ಹದಗೆಟ್ಟಿದೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಬಾಲಕ ತನ್ನ ತಂದೆಯ ಬಳಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಬಾಲಕನ ಹೇಳಿಕೆಯ ಆಧಾರದಲ್ಲಿ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಪ್ರಕರಣದ ಪ್ರಥಮ ವರ್ತಮಾನವನ್ನು ಪದ್ಮಾವತಿ ಜಿ. ಅವರು ಮಾಡಿದ್ದು, ಡಾ.ನವೀನ್ ಕುಮಾರ್ ಎಂ.ಡಿ. ಅವರು ತನಿಖೆ ನಡೆಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಭಿಯೋಜನೆಯ ಪರ ವಿಚಾರಣೆ ಮಾಡಲಾದ ಸಾಕ್ಷಿಗಳು ಮತ್ತು ದಾಖಲೆಗಳಿಂದ ಆರೋಪಿ ಬಸವರಾಜನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ನೊಂದ ಬಾಲಕನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 8 ಲಕ್ಷ ರೂ. ಸೇರಿದಂತೆ ಒಟ್ಟು 9 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ತುಮಕೂರು ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ. ಕೆ.ಎಸ್. ಅವರು ವಾದ ಮಂಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW