ಶಿಗ್ಗಾವಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ, ಮುಂಬರುವ ಶಿಗ್ಗಾವಿ ಮತಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರು ಸ್ಪರ್ಧಿಸಬೇಕೆಂದು ನಿರ್ಣಯಿಸಲಾಗಿದೆ.
ಶಿಗ್ಗಾವಿ ಪಟ್ಟಣದಲ್ಲಿನ ಪಕ್ಷದ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ, ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ಕಾರ್ಯನಿರ್ವಾಹಕ ಸಮಿತಿಯು ಈ ವಿಚಾರವಾಗಿ ವಿಸ್ತೃತವಾಗಿ ಚರ್ಚೆ ನಡೆಸಿತು. ನಂತರ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್. ಎಚ್. ಅವರು ಈ ವಿಚಾರವಾಗಿ ನಿರ್ಣಯ ಮಂಡಿಸಿದರು. ಈ ನಿರ್ಣಯವನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಸೋಮಸುಂದರ್ ಎಸ್. ಕೆ. ಮತ್ತು ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಾಡಶೆಟ್ಟಿಹಳ್ಳಿ ಅವರುಗಳು ಅನುಮೋದಿಸಿದರು. ಈ ನಿರ್ಣಯವನ್ನು ಸಭೆಯು ಒಕ್ಕೊರಲಿನಿಂದ ಅಂಗೀಕರಿಸಿತು.
ಹಾಗೆಯೆ, ಕೆ.ಆರ್.ಎಸ್. ಪಕ್ಷದ ಸಂಸ್ಥಾಪನಾ ದಿನದಂದು ನಡೆಸುವ ವಾರ್ಷಿಕ ಅಧಿವೇಶನವನ್ನು ಈ ಬಾರಿ ಶಿಗ್ಗಾವಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಈ ಅಧಿವೇಶನವು ಆಗಸ್ಟ್ 10, 2024 ರಂದು ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರವಿ ಕೃಷ್ಣಾರೆಡ್ದಿಯವರು, “ಶಿಗ್ಗಾವಿ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಪಕ್ಷ ಕೈಗೊಂಡಿರುವ ನಿರ್ಣಯವನ್ನು ಗೌರವಿಸುವುದಾಗಿ ಮತ್ತು ರಾಜ್ಯದಲ್ಲಿ ಸ್ವಚ್ಚ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣದ ಮೂಲಕ ದುಷ್ಟ ಮತ್ತು ಭ್ರಷ್ಟ ರಾಜಕೀಯದಿಂದ ನರಳುತ್ತಿರುವ ರಾಜ್ಯಕ್ಕೆ ಕನಕದಾಸರ ಹಾಗು ಸಂತ ಶಿಶುನಾಳ ಶರೀಫರ ನಾಡಾದ ಶಿಗ್ಗಾವಿ–ಸವಣೂರು ಮತಕ್ಷೇತ್ರವು ಈ ಉಪಚುನಾವಣೆಯ ಮೂಲಕ ದಿಕ್ಸೂಚಿಯಾಗಲಿದೆ ಎಂಬ ಆಶಾಭಾವನೆ ತಮಗಿದ್ದು, ಇದನ್ನು ಸಾಕಾರ ಮಾಡಲು ಪಕ್ಷದ ಸರ್ವ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಶ್ರಮಿಸಿ ಬಸವಣ್ಣನವರ ಕಲ್ಯಾಣ ಕರ್ನಾಟಕ, ಕುವೆಂಪುರವರ ಸರ್ವೋದಯ ಕರ್ನಾಟಕ ನಿರ್ಮಿಸಲು ಕಾರಣರಾಗಬೇಕು ಎಂದು ಮನವಿ ಮಾಡಿದರು.
ರಾಜ್ಯದ ಜನಸಾಮಾನ್ಯರ ದೇಣಿಗೆ ಮತ್ತು ಬೆಂಬಲದೊಂದಿಗೆ ಪಕ್ಷ ಈ ಚುನಾವಣೆಯನ್ನು ಎದುರಿಸಲಿದ್ದು, ಆ ಮೂಲಕ ಭ್ರಷ್ಟ JCB ಪಕ್ಷಗಳ ಹಣ ಮತ್ತು ಜಾತಿ ರಾಜಕಾರಣಕ್ಕೆ ಪ್ರಬಲ ಸವಾಲು ಒಡ್ಡಲಿದೆ ಮತ್ತು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೆ, ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣದ ಪರವಿರುವ ಎಲ್ಲಾ ಸಮಾನಮನಸ್ಕ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು ಹಾಗು ನಾಯಕರುಗಳು ಈ ಚುನಾವಣೆಯಲ್ಲಿ KRS ಪಕ್ಷವನ್ನು ಬೆಂಬಲಿಸಬೆಕೆಂದು” ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


