ಶಿವಮೊಗ್ಗ: ಶಿವಮೊಗ್ಗದ ಜೆಡಿಎಸ್ ನಾಯಕ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಬುಧವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ತುಮಕೂರು ಮಾಜಿ ಶಾಸಕ ಎಸ್. ಶಫಿ ಅಹ್ಮದ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಪಕ್ಷ ಸೇರಿದರು.
ಡಿ. ಕೆ. ಶಿವಕುಮಾರ್ ಮಾತನಾಡಿ, ಎಂ. ಶ್ರೀಕಾಂತ್ ನನ್ನ ಒಳ್ಳೆಯ ಗೆಳೆಯ ಹಾಗೂ ಒಳ್ಳೆಯ ಸಂಘಟನಾಗಾರ. ನಾಯಕರನ್ನು ಸೃಷ್ಟಿ ಮಾಡುವಂತಹ ಶಕ್ತಿ ಅವರಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಆತ್ಮೀಯಾಗಿ ಸ್ವಾಗತಿಸುತ್ತೇನೆ. ಅವರಂತಹ ನಾಯಕ ನಮ್ಮ ಪಕ್ಷದಲ್ಲಿರಬೇಕು ಎನ್ನುವುದು ನನ್ನ ಆಶಯ ಎಂದು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. 2013ರ ಚುನಾವಣೆಯಲ್ಲಿ ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 21,638 ಮತಗಳನ್ನು ಪಡೆದು ಸೋಲು ಕಂಡಿದ್ದರು.
ಆಯನೂರು ಮಂಜುನಾಥ್, ಮಧು ಬಂಗಾರಪ್ಪ, ಆರ್. ಎಂ. ಮಂಜುನಾಥ ಗೌಡ ಬಳಿಕ ಎಂ. ಶ್ರೀಕಾಂತ್ ಈಗ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ನಾಯಕರಾಗಿದ್ದಾರೆ.


