ಬೆಂಗಳೂರು: ಗ್ಯಾರಂಟಿಗಳಿಗಾಗಿ ರಾಜ್ಯದ ಅಭಿವೃದ್ಧಿಗೆ ಸರ್ಕಾರ ಬ್ರೇಕ್ ಹಾಕಿದೆ ಎಂಬ ಆರೋಪ ಶುದ್ಧ ಸುಳ್ಳು. ಆರೋಗ್ಯ, ಶಿಕ್ಷಣ, ಕೃಷಿ ಮತ್ತು ವಸತಿ ಕ್ಷೇತ್ರದ ಯೋಜನೆಗಳು ಕಾಲಬದ್ಧವಾಗಿ ಜಾರಿಗೊಳ್ಳುತ್ತಿವೆ. ಕರ್ನಾಟಕ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗುತ್ತಿದೆ. ಮೂಲಸೌಕರ್ಯಗಳ ನಿರ್ಮಾಣ ಭರದಿಂದ ಸಾಗಿದೆ. ಉದ್ಯೋಗವಕಾಶಗಳು ಹೆಚ್ಚುತ್ತಿದೆ. ಒಟ್ಟಿನಲ್ಲಿ ರಾಜ್ಯ ಅಭಿವೃದ್ದಿಯ ಪಥದಲ್ಲಿ ದಾಪುಗಾಲಿಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದಿನ ಸರ್ಕಾರದಲ್ಲಿ ದುರಾಡಳಿತ, ಸಾಲ ಮತ್ತು ಬದ್ಧತಾ ವೆಚ್ಚ ಮಿತಿಮೀರಿದ್ದರಿಂದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದವರೇ ಈಗ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಪಕ್ಷದವರು ಶಿವಮೊಗ್ಗದಲ್ಲಿ ಯಾವುದರ ಬಗ್ಗೆ ಸತ್ಯ ಶೋಧನೆ ಮಾಡುತ್ತಾರೆ? ಈದ್–ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಯಾರು ಕಲ್ಲು ಎಸೆದಿದ್ದಾರೋ ಅವರ ಮೇಲೆ ಕ್ರಮ ಜರುಗಿಸಲಾಗಿದೆ. ತಪ್ಪಿತಸ್ಥರು ಯಾವ ಪಕ್ಷದವರೇ ಆಗಿದ್ದರೂ, ಯಾರೇ ಆಗಿದ್ದರೂ ಅವರನ್ನು ಬಿಡಬೇಡಿ, ಸೂಕ್ತ ಕ್ರಮ ಜರುಗಿಸಿ, ಯಾರೊಬ್ಬರಿಗೂ ಕಾನೂನು ಕೈಗೆತ್ತಿಕೊಳ್ಳಲು ಬಿಡಬೇಡಿ ಎಂದು ಬಹಳ ಸ್ಪಷ್ಟವಾಗಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಅಪರಾಧಿಗಳಿಗೆ ಕಾನೂನಿನಡಿ ತಕ್ಕ ಶಿಕ್ಷೆಯಾಗುತ್ತದೆ, ಇದರಲ್ಲಿ ಸತ್ಯ ಶೋಧನೆ ಮಾಡಲು ಏನಿದೆ? ಎಂದು ಸಿಎಂ ಪ್ರಶ್ನಿಸಿದ್ದಾರೆ.


