ಶಿರಾ: ನಗರದ ಆಸ್ತಿ ಮಾಲೀಕರಿಗೆ ಇ-ಖಾತೆ ಪಡೆಯುವುದನ್ನು ಸರ್ಕಾರವು ಅತ್ಯಂತ ಸರಳೀಕರಿಸಿದ್ದು, ಇನ್ನು ಮುಂದೆ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಇ–ಖಾತೆ ಪಡೆಯಬಹುದು ಎಂದು ನಗರಸಭೆ ಪೌರಾಯುಕ್ತ ಕೆ.ರುದ್ರೇಶ್ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲೀಕರಣದ ಭಾಗವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ನಗರಸಭೆಯಿಂದ ಸುಮಾರು 10,198 ಇ–ಖಾತೆಗಳನ್ನು ವಿತರಿಸಲಾಗಿದ್ದು, ಆನ್ ಲೈನ್ ಅರ್ಜಿ ಸಲ್ಲಿಕೆಯಿಂದ ಪ್ರಕ್ರಿಯೆ ಮತ್ತಷ್ಟು ತ್ವರಿತಗೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಅಗತ್ಯವಿರುವ ದಾಖಲೆಗಳು: ಇ-ಖಾತೆಗೆ ಅರ್ಜಿ ಸಲ್ಲಿಸಲು ಮಾಲೀಕರ ಭಾವಚಿತ್ರ, ಸ್ವಚ್ಛಗೊಳಿಸಿದ ಕಟ್ಟಡ ಅಥವಾ ನಿವೇಶನದ ಜಿಪಿಎಸ್ ಭಾವಚಿತ್ರ, ಗುರುತಿನ ಚೀಟಿ, ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಚಲನ್, ನೀರು ಮತ್ತು ಒಳಚರಂಡಿ ಶುಲ್ಕದ ಪಾವತಿ ರಶೀದಿ, ಕ್ರಯಪತ್ರ, ಇ.ಸಿ (EC), ವಿದ್ಯುತ್ ಆರ್ ಆರ್ ಸಂಖ್ಯೆ ಮತ್ತು ಕಟ್ಟಡ ಪರವಾನಗಿ ಪತ್ರಗಳನ್ನು ಆನ್ ಲೈನ್ ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.
ದಾಖಲೆಗಳು ಸರಿಯಾಗಿದ್ದರೆ ಪರಿಶೀಲನೆಯ ನಂತರ ಶೀಘ್ರವಾಗಿ ಇ–ಖಾತೆ ನೀಡಲಾಗುವುದು. ಇದಲ್ಲದೆ, ನಗರದ 17 ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


