ಬೆಂಗಳೂರು: ಮಾನವೀಯತೆಯ ಆಧಾರದ ಮೇಲೆ ಪರಿಹಾರ ಘೋಷಣೆ ಮಾಡಿದ್ರೆ, ಬಿಜೆಪಿಯವರು ತಕರಾರು ಮಾಡ್ತಾರೆ ಅಂದರೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಆನೆ ಕೇರಳದ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಸಂಬಂಧ ಕರ್ನಾಟಕದಿಂದ ಪರಿಹಾರ ಘೋಷಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಟೀಕೆಗಳಿಗೆ ಉತ್ತರಿಸಿದ ಅವರು, ದಯವೇ ಧರ್ಮದ ಮೂಲವಯ್ಯ ಅಂತ ವಿಶ್ವಗುರು ಬಸವಣ್ಣ ಹೇಳಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಮಾನವೀಯತೆಯ ಆಧಾರವಾಗಿ ಪರಿಹಾರ ಘೋಷಣೆ ಮಾಡಿದ್ರೆ, ಅದಕ್ಕೆ ಬಿಜೆಪಿಯವರು ತಕರಾರು ಮಾಡ್ತಾರೆ ಎಂದರು.
ಅದು ನಮ್ಮ ಆನೆ, ನ.30ರಂದು ಹಾಸನದ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಈ ಆನೆಯನ್ನ ಸೆರೆ ಹಿಡಿಯಲಾಯ್ತು. ಆ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಈ ಆನೆಗೆ ಸ್ಥಳೀಯರು ಬೇಡ ಅಂದಿದ್ದಕ್ಕೆ ಬಂಡಿಪುರ ಅರಣ್ಯ ಪ್ರದೇಶಕ್ಕೆ ಬಿಡಲಾಯ್ತು. ಬಂಡಿಪುರದಿಂದ ಈ ಆನೆ ಕ್ರಾಸ್ ಆಗಿ ಕೇರಳ ಕಡೆಗೆ ಹೋಗಿದೆ. ಆಗ ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಆ ವ್ಯಕ್ತಿಯ ಪರಿವಾರದ ಪರಿಸ್ಥಿತಿ ಏನಿದೆ ನೋಡಿದ್ದೀರಾ? ವಿಧವೆ ಮಹಿಳೆ, ಆತನ ಮಕ್ಕಳ ಬಗ್ಗೆ ಮಾನವೀಯತೆ ಇರಬಾರದಾ? ದಯೆ ಇರಬಾರದಾ? ಬಿಜೆಪಿಯವರು ಇಷ್ಟು ಅಮಾನವೀಯವಾಗಿ ವರ್ತನೆ ಮಾಡ್ಬೇಕಾ? ಎಂದು ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ಕಿಡಿಕಾರಿದರು.


