ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ 851ನೇ ಜಯಂತಿಯನ್ನು ಆಚರಿಸಲಾಯಿತು.
ಶಿವಯೋಗಿ ಸಿದ್ಧರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿ ಹಾಡಿದ್ದಾರೆ. ಅವುಗಳ ಪೈಕಿ ಈಗ 1,679 ವಚನಗಳ ಮಾತ್ರ ಲಭಿಸಿವೆ. ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದಾರೆ. ಬಸವಣ್ಣನವರು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು. ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು ಎಂದು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿ ತಹಶೀಲ್ದಾರ್ ರೇಣು ಕುಮಾರ್ ಹೇಳಿದರು.
ಅಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ದಿವ್ಯಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು, 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು. ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಅವರು ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಭೋವಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ , ಗ್ರೇಡ್ 2 ತಹಶೀಲ್ದಾರ್ ಸುಮತಿ, ಎ ಡಿ ಎಲ್ ಆರ್ ಶಿವಶಂಕರ್ ,ಕಸಬಾ ಹೋಬಳಿ ಕಂದಾಯ ತನಿಖಾಧಿಕಾರಿ ಶಿವಕುಮಾರ್, ಇನ್ನರ್ ವೀಲ್ ಸಂಕಲ್ಪ ಸಂಸ್ಥೆಯ ಸಂಸ್ಥಾಪಕಿ ಗೀತಾ ಸುರೇಶ್ , ಪಟ್ಟಣ ಪಂಚಾಯಿತಿ ಮಾಜಿ ಆದ್ಯಕ್ಷೇ ಮತ್ತು ಹಾಲಿ ಸದಸ್ಯೆ ಆಶಾ ರಾಜಶೇಖರ್, ಕಂದಾಯ ಇಲಾಖೆಯ ವತ್ಸಲ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಮಹಾಲಿಂಗಯ್ಯ ಗೌರವಾಧ್ಯಕ್ಷ ಶಿವಲಿಂಗಯ್ಯ , ಮಂಜುನಾಥ್ ಸೇರಿದಂತೆ ಭೋವಿ ಸಮಾಜದ ವಿದ್ಯಾರ್ಥಿಗಳು ಮತ್ತು ಮುಖಂಡರುಗಳು ಇತರೆ ಇಲಾಖೆಯ ನೌಕರರುಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ