ತುಮಕೂರು : ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಾಳಲ್ಲೂ ಶಿಕ್ಷಣದ ಬೆಳಕು ಮೂಡಬೇಕೆಂದು ತಮ್ಮ 111 ವರ್ಷಗಳ ಸುದೀರ್ಘ ಆಯಸ್ಸನ್ನು ಮುಡುಪಾಗಿಟ್ಟ ನಾಡಿನ ಮಹಾಬೆಳಕು ಸಿದ್ದಗಂಗಾ ಶ್ರೀಗಳು ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಹೇಳಿದರು.
ಸಿದ್ಧಗಂಗಾಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ “ಸಿದ್ಧಗಂಗಾಶ್ರೀ’ ‘ಸಂಘ ಸಿರಿ’ ಪ್ರಶಸ್ತಿ ಸಮಾರಂಭದಲ್ಲಿ ಸಂಘದ ಪರವಾಗಿ ಅನಿಸಿಕೆ ಕುರಿತು ಅವರು ಮಾತನಾಡಿದರು.
ನಮ್ಮ ರಾಜ್ಯದ ಹಿರಿಯ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘಕ್ಕೆ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಮಹಾಸ್ವಾಮೀಜಿಯವರ ಮಿಂಚಿನ ಸಂಚಾರ ಎಲ್ಲರಿಗೂ ಚೈತನ್ಯದಾಯಕವಾಗಿದೆ ಎಂದರು.
ಮಂಡ್ಯದಲ್ಲಿ ಪೂಜ್ಯರ ಉದ್ಯಾನವನ ನಿರ್ಮಾಣಗೊಳಿಸಲು ಸಂಪೂರ್ಣವಾಗಿ ಆಶೀರ್ವದಿಸಿ ಪೂಜ್ಯರ ಪುತ್ಥಳಿಯನ್ನು ದಯಪಾಲಿಸಿದ ಮಹಾ ಕರುಣಾಮಯಿ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರ ಕಾಯಕ ನಿಷ್ಠೆ ಸಮಾಜಕ್ಕೆ ಸ್ಪೂರ್ತಿದಾಯಕ ಎಂದು ಬಣ್ಷಿಸಿದರು.
ಸಸ್ಯಾಂದೋಲನ : ರೈತರು ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ 119ನೇ ಜನ್ಮದಿನವಾದ ಏಪ್ರಿಲ್ 1 ರಂದು ಭಕ್ತರು ಸಸ್ಯಾಂದೋಲನ ನಡೆಸಿ ಮನೆಗೊಂದು ಸಸಿ ನೆಡಬೇಕೆಂದು ಮನವಿ ಮಾಡಿದರು.
ಪೂಜ್ಯರ ಲಿಂಗೈಕ್ಯದಿನವಾದ ಜ.21 ಹಾಗೂ ಜನ್ಮದಿನದಂದು ಸಸಿ ವಿತರಣೆ ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಸ್ವಾಮೀಜಿಯವರ ಹೆಸರು ಸದಾ ಹಸಿರಾಗಿ ಉಳಿಯುವಂತೆ ಮಾಡಬೇಕೆಂದು ಕೋರಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


