ತುಮಕೂರು: ಪರಿಶಿಷ್ಟ ಜಾತಿಯವರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಎಂದು ಹೇಳುವ ಮೂಲಕ ಸಮುದಾಯದವರನ್ನು ಅವಮಾನ ಮಾಡಿದ್ದಾರೆ. ನಮ್ಮ ಸ್ವಾಭಿಮಾನವನ್ನು ಕೆಣಕಿದ್ದಾರೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಟ್ಟೆಪಾಡಿಗೆ ಪರಿಶಿಷ್ಟ ಜಾತಿಯ ನಾಯಕರು ಬಿಜೆಪಿಯಲ್ಲಿ ಇದ್ದಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ವಿರುದ್ಧ ನಗರದ ಬಿಜಿಎಸ್ ವೃತ್ತದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್ ಗೆ ಹೋಗಿರುವುದು ಕೂಡ ಹೊಟ್ಟೆ ಪಾಡಿಗೆಯೇ? ಎಂದು ಪ್ರಶ್ನಿಸಿದರು.
ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ, ಸ್ವಾತಂತ್ರ್ಯ ಜನಸಾಮಾನ್ಯರಿಗೆ ಇದೆ. ಸಿದ್ದರಾಮಯ್ಯ ಹೇಳಿಕೆಯನ್ನು ಗಮನಿಸಿದರೆ ಅವರಿಗೆ ಹುಚ್ಚು ಹಿಡಿದಂತೆ ಕಾಣುತ್ತಿದೆ. ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿಯವರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಮ್ಮನ್ನು ಕಳೆದುಕೊಂಡು ಕಾಂಗ್ರೆಸ್ ಅಧಿಕಾರವನ್ನೂ ಕಳೆದುಕೊಂಡಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಪರಿಶಿಷ್ಟ ಜಾತಿಯವರು ಗೆದ್ದರೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿ ಹೋಗುತ್ತದೆ ಎಂಬ ಸ್ವಾರ್ಥದಿಂದ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ ಸೋಲಿಗೆ ಕಾರಣರಾಗಿದ್ದೀರಿ. ಇದು ರಾಜ್ಯಕ್ಕೆ ಗೊತ್ತಿರುವ ವಿಚಾರ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 5 ವರ್ಷಗಳಲ್ಲಿ 9,080 ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯಗಳು ನಡೆದಿವೆ. 358 ಮಂದಿ ಕಗ್ಗೊಲೆ, 908 ಮಹಿಳೆಯರ ಮೇಲೆ ಮಾನಭಂಗ ನಡೆದಿದೆ ಎಂದರು.
ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್, ಮುಖಂಡರಾದ ವರದಯ್ಯ, ಹನುಮಂತಪ್ಪ, ಪ್ರತಾಪ್, ಸುಶೀಲ್, ಸಂದೀಪ್ ಗೌಡ, ಅಂಜನಮೂರ್ತಿ, ಹನುಮಂತರಾಜು, ಕೊಪ್ಪಲ್ ನಾಗರಾಜ್, ಫರ್ಜಾನಾ ತಬಸ್ಸುಮ್, ಸೌಮ್ಯ, ಮಾರುತಿ ಗಂಗಹನುಮಯ್ಯ, ಆನಂದ್ ಮೊದಲಾದವರು ಇದ್ದರು.