ತಮಗೆಲ್ಲ ಗೊತ್ತಿದೆ, ಈ ಮಠ ನನಗೆ ಪುಣ್ಯ ದೈವ ಕ್ಷೇತ್ರ. ನನಗೆ ಪ್ರತಿಯೊಂದು ಸಂಧರ್ಭದಲ್ಲಿ ಕೂಡ ಗಂಗಾಧರ ಅಜ್ಜ, ಇಲ್ಲಿಯ ಸ್ವಾಮೀಜಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನಾನು ಅಧಿಕಾರ ತೆಗೆದುಕೊಂಡಾಗಿನಿಂದಲೂ, ಯಾರಿಗೆ ಟಿಕೆಟ್ ಕೊಡ್ಬೇಕು, ಯಾರಿಗೆ ಕೊಡ್ಬಾರ್ದು ಅನ್ನೋದನ್ನ ಇಲ್ಲೇ ಮಾರ್ಗದರ್ಶನ ಪಡೆದು ನಿರ್ಧಾರ ಮಾಡಿದ್ದೇನೆ. ನನಗೆ ಸಂಪೂರ್ಣವಾದ ಮಾರ್ಗದರ್ಶನ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ತಿಪಟೂರು ತಾಲೂಕಿನಲ್ಲಿರುವ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ಕಮ್ ಟ್ಯಾಕ್ಸ್, ಐಟಿ ರೇಡ್ ಆದಾಗಲೂ ನಾನು ಅಜ್ಜಯ್ಯನ ಮಾರ್ಗದರ್ಶನ ಪಡೆದಿದ್ದೆ. ಹೆಲಿಕಾಪ್ಟರ್ ದುರಂತ ಆದ ನಂತರ ಕೂಡ ನನ್ನ ಮಗಳು ಇಲ್ಲಿಗೆ ಬಂದು ಹೋದಳು. ನನಗೆ ಮಾನಸಿಕವಾಗಿ ಧೈರ್ಯ ಕೊಟ್ಟವರು ಅಜ್ಜಯ್ಯನವ್ರು. ನಾನು 134 ಸೀಟು ಕೇಳ್ಕೊಂಡಿದ್ದೆ. ಯಾರ ಹಂಗಿನಲ್ಲೂ ನಾವು ಅಧಿಕಾರ ಮಾಡ್ಬಾರ್ದು ಅಂತಾ ಬೇಡ್ಕೊಂಡಿದ್ದೆ. ನಾನು ಅಧಿಕಾರ ಹಿಡಿದಾಗಲೇ, ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡ್ಬೇಕು ಅನ್ನೋ ಮಾರ್ಗದರ್ಶನ ಬಂದಿತ್ತು. ಹೀಗಾಗಿಯೇ ನಾವು ಗೃಹಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡೋ ಯೋಜನೆ ಮಾಡಿದ್ವಿ ಎಂದರು.
ಇವತ್ತು ಚೆಲುವರಾಯಸ್ವಾಮಿ ಇಲ್ಲಿ ಬಂದಿದ್ದಾರೆ. ಅವರಿಗೆ ಒಂದು ಆತಂಕ ಇತ್ತು. ಮಂಡ್ಯದಲ್ಲಿ ಏನಾಗುತ್ತೋ ಏನೋ ಅನ್ನೋ ಆತಂಕ ಇತ್ತು. ಅವರಿಗೇ ಕೂಡ ಧೈರ್ಯ ತುಂಬಿದೆ. ಈಗ ಮಂಡ್ಯದಲ್ಲಿ ಕಾಂಗ್ರೆಸ್ ಗೆ ಗೆಲುವಾಗಿದೆ. ಇದು ಮಂಡ್ಯ ಜನತೆಯ ಗೆಲುವು. ನಾಮಿನೇಷನ್ ಹಾಕುವಾಗಲು ಅಜ್ಜನ ನೆನಸಿಕೊಂಡು ಹಾಕಿದ್ದೆ. ಹೀಗಾಗಿ ಎಲ್ಲಾ ರಿಸಲ್ಟ್ ಬಂದಮೇಲೆ ಮೊದಲು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದರು.
ಗುರಿ ತಲುಪಬೇಕಾದ್ರೆ ಗುರು ಮಾರ್ಗದರ್ಶನ ಬೇಕಾಗುತ್ತೆ. ಗುರು ಮಾರ್ಗದರ್ಶನ ದಲ್ಲಿ ನಾವೆಲ್ಲರೂ ನಡೆಯುತ್ತಾ ಇದ್ದೇವೆ. ಅವರು ಏನೇ ಹೇಳಿದ್ರು ನಾವು ಕೇಳ್ತಿವಿ. ನಾವು ಅವರನ್ನ ನಂಬಿ ಬಂದಿದ್ದೀವಿ. ಏನೇನು ಕೇಳಿದ್ದೀನಿ ಎಲ್ಲಾ ಕೊಟ್ಟಿದ್ದಾರೆ. ನಾನು ಪಕ್ಷಕ್ಕೆ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇನೆ ಎಂದರು.
ದಿನೇಶ್ ಗುಂಡೂರಾವ್ ಅವ್ರು ನೈತಿಕ ರಾಜೀನಾಮೆ ಕೊಟ್ಟಾಗ, ಸೋನಿಯಾ ಗಾಂಧಿ ಅವರು ನನ್ನ ಹೆಗಲಿಗೆ ಜವಾಬ್ದಾರಿ ಹೊರೆಸಿದ್ರು. ನಾನು ಜೈಲಿಂದ ಹೊರಬರುತ್ತಲೇ ಅಧಿಕಾರ ಹಿಡಿದೆ. ಹಗಲು ರಾತ್ರಿ ದುಡಿದಿದ್ದೇನೆ. ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಶಾಸಕರು, ಬೇಳೂರು ಗೋಪಾಲಕೃಷ್ಣ ಕೂಡ ಇಲ್ಲಿ ಬಂದಿದ್ದಾರೆ. ಎಲ್ಲರೂ ಅವರವರಾಗಿಯೇ ಬಂದಿದ್ದಾರೆ. ನೋಡೋಣ.. ಆಗ್ತೀನಿ ಅನ್ನೋ ನಂಬಿಕೆ ನನಗಿದೆ. ಪರೋಕ್ಷವಾಗಿ ನಾನೇ ಸಿಎಂ ಆಗ್ತೀನಿ ಅನ್ನೋ ವಿಶ್ವಾಸ ವ್ಯಕ್ತವನ್ನು ಡಿ.ಕೆ.ಶಿವಕುಮಾರ್ ವ್ಯಕ್ತಪಡಿಸಿದರು.
ಕೆಲವರು ನನಗೆ ಸಿದ್ದರಾಮಯ್ಯರ ನಡುವೆ ವ್ಯತ್ಯಾಸ ಇದೆ ಎಂದರು. ನಮ್ಮಿಬ್ಬಿರ ನಡುವೆ ವ್ಯತ್ಯಾಸ ಇಲ್ಲ. ಹಲವು ಬಾರಿ ಪಕ್ಷದ ವಿಚಾರದಲ್ಲಿ ನಾನು ಸೋತಿದ್ದೇನೆ. ನಾನು ಸೋತು ಸಿದ್ದರಾಮಯ್ಯರಿಗೆ ಸಹಕಾರ ಕೊಟ್ಟಿದ್ದೇನೆ. ಅವರೂ ಸಹಕಾರ ಕೊಡುವ ವಿಶ್ವಾಸ ಇದೆ ಎಂದರು.
ಆರಂಭದಲ್ಲಿ ನನ್ನನ್ನು ಮಂತ್ರಿ ಮಾಡದೇ ಇದ್ದಾಗ ನಾನು ತಾಳ್ಮೆಯಿಂದ ಇರಲಿಲ್ವಾ, ಸಿದ್ದರಾಮಯ್ಯರಿಗೆ ನಾನು ಸಾಕಾರ ಕೊಟ್ಟಿದ್ದೇನೆ. ಪರೋಕ್ಷವಾಗಿ ಸಿದ್ದರಾಮಯ್ಯರು ತಮಗೆ ಅವಕಾಶ ಕಲ್ಪಿಸಿಕೊಡುವಂತೆ ಡಿ.ಕೆ.ಶಿವಕುಮಾರ್ ವಿನಂತಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy