ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ವೈಷಮ್ಯ ಬೆಳೆದು ತಲ್ವಾರ್‌ನಿಂದ ಸ್ನೇಹಿತ ಹಾಗೂ ಆತನ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಶರಣಪ್ಪ ಹಾಗೂ ವಿಜಯ್ ವಿದ್ಯಾಗಿರಿಯ ಎಂಬಿಎ ಕಾಲೇಜ್ ಬಳಿ ನಿಂತಿದ್ದಾಗ ಬೈಕ್ ಮೇಲೆ ಬಂದ ಕೆಲವು ದುಷ್ಕರ್ಮಿಗಳು ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಇಬ್ಬರ ತಲೆ ಹಾಗೂ ಕೈಗಳಿಗೆ ತಲ್ವಾರ್‌ನಿಂದ ಹಲ್ಲೆ ಮಾಡಲಾಗಿತ್ತು.
ಸ್ಥಳಿಯರು ಇವರಿಬ್ಬರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ವಿಜಯ್ ಎರಡೂ ಕೈಗಳಿಂದ ತೀವ್ರ ರಕ್ತಸ್ರಾವ ಆಗಿದ್ದರಿಂದ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ನವನಗರ ಪೊಲೀಸರು ತನಿಖೆ ಆರಂಭಿಸಿದಾಗ ಸ್ನೇಹಿತರಿಂದಲೇ ಈ ಹಲ್ಲೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ವಿಜಯ್ ಬೇವೂರ್ ಸ್ನೇಹಿತರಾದ ವಿಠ್ಠಲ ಬಂಟನೂರು, ವಿಲಾಸ ಜಾಧವ್, ಬಳಿಗೇರ ಹಾಗೂ ಸಮೀರ್ ಮುಲ್ಲಾ ಎಂಬುವರು ಕ್ರಿಕೆಟ್ ವಿಚಾರಕ್ಕೆ ನಡೆದ ಜಗಳಕ್ಕೆ ಸಿಟ್ಟಾಗಿ ಹಲ್ಲೆ ನಡೆಸಿರುವ ವಿಚಾರ ಗೊತ್ತಾಗಿದೆ.
ಶರಣಪ್ಪ ಬೇವೂರ್ ಹುಬ್ಬಳ್ಳಿಯಲ್ಲಿ ಮೆಡಿಕಲ್ ಓದುತ್ತಿದ್ದ. ಗುರುವಾರ ಅಣ್ಣ ವಿಜಯ ಅವರನ್ನು ಭೇಟಿ ಆಗಲು ಬಂದಿದ್ದ. ಈ ವೇಳೆ ನಾಲ್ವರು ಆರೋಪಿಗಳು ವಿಜಯ್ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ. ಆಗ ಸಹೋದರ ಶರಣಪ್ಪ ತಡೆಯಲು ಮುಂದಾದಾಗ ಆತನ ಮೇಲೂ ತಲ್ವಾರ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.


