ರಾಹುಲ್ ಗಾಂಧಿ ಅವರು ಕನ್ನಡತಿಯಾಗಿರುವ ಐಶ್ವರ್ಯಾ ರೈ ಅವರನ್ನು ಅವಮಾನಿಸಿರುವ ಬಗ್ಗೆ ಪ್ರಶ್ನೆ ಮಾಡಿದೆ. ರಾಹುಲ್ ಗಾಂಧಿ, ಭಾರತದ ಹೆಮ್ಮೆಯ ಐಶ್ವರ್ಯಾ ರೈ ಅವರನ್ನು ಅವಮಾನಿಸುವ ಮೂಲಕ ಇನ್ನಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ. ಶೂನ್ಯ ಸಾಧನೆ ಮಾಡಿರುವ ನಾಲ್ಕನೇ ತಲೆಮಾರಿನ ರಾಜಕೀಯ ಮನೆತನದ ಕುಡಿಯು ಈಗ ಭಾರತಕ್ಕೆ ಹೆಚ್ಚು ಕೀರ್ತಿ ತಂದ ಐಶ್ವರ್ಯಾ ರೈ ವಿರುದ್ಧ ನಿಂದನೆಗೆ ಇಳಿದಿದೆ ಎಂದು ಬಿಜೆಪಿ ಕುಟುಕಿದೆ.
ಇಷ್ಟು ಮಾತ್ರವಲ್ಲ, ರಾಜ್ಯ ಬಿಜೆಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯನವರೇ, ನಿಮ್ಮ ಬಾಸ್ ಕನ್ನಡಿಗರನ್ನು ಅವಮಾನಿಸುವುದನ್ನು ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ನೀವು ನಿಮ್ಮ ಕನ್ನಡಾಭಿಮಾನವನ್ನು ಎತ್ತಿ ಹಿಡಿಯುತ್ತೀರಾ? ಮತ್ತು ಇಂತಹ ಅಗೌರವದ ಮಾತುಗಳ ವಿರುದ್ಧ ಮಾತನಾಡುತ್ತೀರಾ? ಅಥವಾ ನಿಮ್ಮ ಸಿಎಂ ಕುರ್ಚಿಯನ್ನು ಕಾಪಾಡಲು ಮೌನವಾಗಿರುತ್ತೀರಾ? ಎಂದು ಬಿಜೆಪಿ ಗುಡುಗಿದೆ.
ಜನವರಿ 22 ರಂದು ನಡೆದ ರಾಮಮಂದಿರ ಉದ್ಘಾಟನೆಯ ಸಮಾರಂಭದಲ್ಲಿ ಐಶ್ವರ್ಯಾ ರೈ ಉಪಸ್ಥಿತಿಯ ವಿರುದ್ಧ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋ ಕ್ಲಿಪ್ ಗಳನ್ನು ಬಿಜೆಪಿ ಹಂಚಿಕೊಂಡಿದೆ. ಆದರೆ, ಗಮನಾರ್ಹ ಸಂಗತಿಯೆಂದರೆ, ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯಲ್ಲಿ ಐಶ್ವರ್ಯಾ ರೈ ಹಾಜರಿರಲಿಲ್ಲ. ಬದಲಾಗಿ ಪತಿ ಅಭಿಷೇಕ್ ಬಚ್ಚನ್ ಮತ್ತು ಮಾವ ಅಮಿತಾಭ್ ಬಚ್ಚನ್ ಹಾಜರಿದ್ದರು.
ಭಾನುವಾರ ಪ್ರಯಾಗ್ ರಾಜ್ ನಲ್ಲಿ ನಡೆದ ಭಾರತ್ ಜೋಡೋ ನ್ಯಾಯ ಯಾತ್ರಾ ಮೆರವಣಿಗೆಯಲ್ಲಿ ಮಾತನಾಡಿದ ರಾಹುಲ್ “ನೀವು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನೋಡಿದ್ದೀರಾ? ಅಲ್ಲಿ ಒಬ್ಬ ಒಬಿಸಿ ಮುಖವಾದರೂ ಇತ್ತೆ? ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಮತ್ತು ನರೇಂದ್ರ ಮೋದಿ ಇದ್ದರು. ದೇಶದ ಸಮಸ್ಯೆಗಳನ್ನು ಯಾವ ಟಿವಿಯಲ್ಲಿಯೂ ತೋರಿಸುತ್ತಿಲ್ಲ. ಕೇವಲ ಮೋದಿಯವರನ್ನು 24 ಗಂಟೆ ತೋರಿಸುತ್ತಾರೆ. ಅದನ್ನ ಬಿಟ್ಟು ಐಶ್ವರ್ಯಾ ರೈ ಕುಣಿಯುವುದನ್ನು ತೋರಿಸುತ್ತಾರೆ ಎಂದು ರಾಹುಲ್ ಟೀಕಿಸಿದ್ದಾರೆ. ಇದೇ ಮಾತು ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


