ತುಮಕೂರು: ಜಿಲ್ಲಾ ಕೇಂದ್ರದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಶ್ರೀ ನುಲಿಯ ಚಂದಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಕುಳುವ ಸಮಾಜದ ಮುಖಂಡರ ಮನವಿ ಮೇರೆಗೆ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ರಾಜ್ಯ ಸಚಿವರು ಪಾಲ್ಗೊಳ್ಳಲಿರುವುದರಿಂದ ಆಗಸ್ಟ್ 19ರಂದು ಆಚರಿಸಬೇಕಿದ್ದ ಜಿಲ್ಲಾ ಮಟ್ಟದ ಶ್ರೀ ನುಲಿಯ ಚಂದಯ್ಯ ಜಯಂತ್ಯೋತ್ಸವವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 11:30 ಗಂಟೆಗೆ ಆಚರಿಸಲು ಅನುವು ಮಾಡಿಕೊಡಬೇಕೆಂದು ಕುಳುವ ಸಮಾಜ ಮುಖಂಡರೆಲ್ಲ ಒಮ್ಮತದಿಂದ ಸಭೆಗೆ ಮನವಿ ಮಾಡಿದರು.
ಮನವಿಗೆ ಒಪ್ಪಿಗೆ ಸೂಚಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 10 ಗಂಟೆಗೆ ಟೌನ್ ಹಾಲ್ ವೃತ್ತದಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಬೇಕು. ಮೆರವಣಿಗೆಯಲ್ಲಿ ಅತ್ಯುತ್ತಮ ಕಲಾ ಪ್ರದರ್ಶನ ನೀಡುವ ತಂಡಗಳನ್ನು ನಿಯೋಜಿಸಬೇಕು. ಶ್ರೀ ನುಲಿಯ ಚಂದಯ್ಯ ಅವರ ಬಗ್ಗೆ ಉತ್ತಮ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದರು.
ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಎಲ್ಲ ತಾಲೂಕುಗಳಲ್ಲಿಯೂ ಕಡ್ಡಾಯವಾಗಿ ಆಚರಿಸಿ ಅವರ ವಚನಾಮೃತದ ಸಾರವನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದರಲ್ಲದೆ ಸಮುದಾಯದ 5 ಮಂದಿ ಸಾಧಕರನ್ನು ಗುರುತಿಸಿ ಗೌರವಿಸಬೇಕು. ಅತೀ ಹೆಚ್ಚು ಅಂಕಗಳಿಸಿದ ಎಸ್‌ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ, ಕುಳುವ ಸಮಾಜದ ವಿವಿಧ ಮುಖಂಡರು ಹಾಜರಿದ್ದರು.
ಆ.26ರಂದು ಶ್ರೀ ಕೃಷ್ಣ ಜಯಂತಿ:
ನಂತರ ಜರುಗಿದ ಆಗಸ್ಟ್ 26ರ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಯಂತಿ ಅಂಗವಾಗಿ ಆಗಸ್ಟ್ 26ರ ಬೆಳಿಗ್ಗೆ 11 ಗಂಟೆಗೆ ಟೌನ್ ಹಾಲ್ ವೃತ್ತದಿಂದ ರಂಗಮಂದಿರದವರೆಗೆ ಶ್ರೀ ಕೃಷ್ಣನ ಭಾವಚಿತ್ರ ಮೆರವಣಿಗೆ, ಮೆರವಣಿಗೆಗೆ ಕಲಾತಂಡ ನಿಯೋಜನೆ, ಮಧ್ಯಾಹ್ನ 1 ಗಂಟೆಗೆ ವೇದಿಕೆ ಕಾರ್ಯಕ್ರಮ, ಉಪನ್ಯಾಸ, ಸಮಾಜದ ಹಿರಿಯ 5 ಮಂದಿಗೆ ಸನ್ಮಾನಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಕಗ್ಗದ ಪದ, ಹೆತ್ತಪ್ಪ-ಜುಂಜಪ್ಪ ಪದ, ಕೋಲಾಟದ ಪದ, ಸೋಬಾನೆ ಪದಗಳನ್ನು ಹಾಡುವ ಕಾಡುಗೊಲ್ಲ ಕಲಾವಿದರಿಗೆ ಅವಕಾಶ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ, ಯಾದವ ಸಮಾಜದ ವಿವಿಧ ಮುಖಂಡರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296