ತುಮಕೂರು: ಶಾಲಾ ಆವರಣ ಕಬಳಿಕೆಯಿಂದ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗುತ್ತಿರುವ ಬಗೆಗಿನ ದೂರಿಗೆ ಸಂಬಂಧಿಸಿದಂತೆ ನಿಗದಿತ ಅವಧಿಯೊಳಗೆ ವರದಿ ಸಲ್ಲಿಸದ ತುಮಕೂರು ತಾಲ್ಲೂಕು ತಹಶೀಲ್ದಾರರು, ಕ್ಷೇತ್ರಶಿಕ್ಷಣಾಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕರಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆ ಹಾಜರಾಗಲು ಸೂಚಿಸಿದೆ.
ತುಮಕೂರು ತಾಲ್ಲೂಕಿನ ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣವನ್ನು ಕೆಲವು ವ್ಯಕ್ತಿಗಳು ಕಬಳಿಸಲು ಅತಿಕ್ರಮ ಪ್ರವೇಶ ಮಾಡುತ್ತಿದ್ದು, ಇದರಿಂದಾಗಿ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗುತ್ತಿರುವ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಶಾಲೆಯ ಆಸ್ತಿಯನ್ನು ರಕ್ಷಿಸುವ ಸಂಬಂಧ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಆದರೆ ನಿಗದಿತ ಅವಧಿಯೊಳಗೆ ಯಾವುದೇ ವರದಿ ಬಂದಿಲ್ಲವಾದುದರಿಂದ ತುಮಕೂರು ತಾಲ್ಲೂಕು ತಹಶೀಲ್ದಾರರು, ಕ್ಷೇತ್ರಶಿಕ್ಷಣಾಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಶಾಲೆಯ ಮುಖ್ಯಶಿಕ್ಷಕರಿಗೆ ಆಯೋಗವು ಸಮನ್ಸ್ ಜಾರಿಗೊಳಿಸಿದ್ದು ಮಾರ್ಚ್ 19ರಂದು ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಖಾಸಗಿ ವ್ಯಕ್ತಿಗಳು ಕಬಳಿಸಲು ಯತ್ನಿಸುತ್ತಿರುವ ಬಗ್ಗೆ ರಫೀಕ್ ಪಾಶಾ ಎಂಬವರು ದೂರು ನೀಡಿದ್ದರು. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಈವರೆಗೆ ವರದಿ ಬಾರದ ಕಾರಣ ತಹಶೀಲ್ದಾರರು, ಕ್ಷೇತ್ರಶಿಕ್ಷಣಾಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಶಾಲೆಯ ಮುಖ್ಯಶಿಕ್ಷಕರಿಗೆ ಮೊದಲ ಹಂತದಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಯ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು.
–ಡಾ.ತಿಪ್ಪೇಸ್ವಾಮಿ ಕೆ.ಟಿ., ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು.
ತುಮಕೂರು ತಾಲ್ಲೂಕಿನ ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಕಾಂಪೌಂಡ್ ಮಾಡಿಸುವ ಒಂದು ಸಣ್ಣ ವಿಚಾರಕ್ಕಾಗಿ ಮಕ್ಕಳ ರಕ್ಷಣಾ ಆಯೋಗ, ಲೋಕಾಯುಕ್ತದವರೆಗೂ ಹೋಗಬೇಕಾಯಿತು. ಜಿಲ್ಲಾಡಳಿತಕ್ಕೆ ಸತತ ಮನವಿ ಮಾಡಿದರೂ ಮೇಲ್ನೋಟಕ್ಕೆ ಕ್ರಮಕೈಗೊಳ್ಳುವಂತೆ ಮಾಡಿತೇ ವಿನಃ ಸರಿಯಾದ ಕ್ರಮಕೈಗೊಳ್ಳಲಿಲ್ಲ. ಸರ್ಕಾರಿ ಶಾಲೆಯ ಕಾಂಪೌಂಡ್ ಹಾಕಿಸುವ ಒಂದು ವಿಚಾರಕ್ಕೆ ಹೋರಾಟಗಾರರು ರಾಜ್ಯಮಟ್ಟದಲ್ಲಿ ಹೋರಾಟ ಮಾಡಬೇಕಾಗಿ ಬಂದಿರುವುದು ತುಮಕೂರು ಜಿಲ್ಲಾಡಳಿತ ನಿಷ್ಕ್ರೀಯವಾಗಿರುವುದಕ್ಕೆ ಸಾಕ್ಷಿಯಾಗಿದೆ.
–ಹೆಚ್.ಎಂ.ವೆಂಕಟೇಶ್, ನೈಜ ಹೋರಾಟಗಾರರ ಸಂಘ, ಬೆಂಗಳೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296