ರಾಜ್ಯದಲ್ಲಿ ವಿದ್ಯುತ್ ನ ಕೃತಕ ಅಭಾವವನ್ನು ಸರ್ಕಾರ ಸೃಷ್ಟಿಸಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಬರ ಇರುವುದು ನಿಜ. ಅದರ ನಡುವೆಯೂ ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ’ ಎಂದು ವಾಗ್ದಾಳಿ ನಡೆಸಿದರು.
ವಿದ್ಯುತ್ ಕೊರತೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರದ ಹೇಳಿಕೆ ಪ್ರಕಾರವೇ ಕೊರತೆ ಇರುವುದು 3 ಕೋಟಿ ಯುನಿಟ್ ಅಷ್ಟೇ. ಕೃತಕ ಅಭಾವ ಸೃಷ್ಟಿ ಮಾಡಿರುವುದು ಸರ್ಕಾರ. ವಿದ್ಯುತ್ ಉತ್ಪಾದನೆ ಬಗ್ಗೆ ಗಮನವನ್ನೇ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ.
ನಾನು ಎರಡು ಬಾರಿ ಸಿಎಂ ಆಗಿದ್ದೆ , ನನ್ನ ಕಾಲದಲ್ಲಿ ಕೃತಕ ಅಭಾವ ಸೃಷ್ಟಿ ಮಾಡಿದ್ದೀವಾ? ದಾಖಲೆ ತೆಗೆಯಿರಿ ಎಂದು ಅವರು ಸವಾಲೆಸೆದರು. ನವರಾತ್ರಿಯ ಸಮಯದಲ್ಲಿ ನಾನು ಹೇಳುತ್ತಿದ್ದೇನೆ, ನನ್ನ ಕಾಲದಲ್ಲಿ ಯಾವುದೇ ಕೆಲಸಕ್ಕೆ ನಾನು ಪರ್ಸಂಟೇಜ್ ಫಿಕ್ಸ್ ಮಾಡಿರಲಿಲ್ಲ, ಮುಂದೆಯೂ ಮಾಡುವವನಲ್ಲ. ನನಗೆ ಗೊತ್ತಿರುವ ಹಾಗೆ ಇಂಧನ ಸಚಿವ ಜಾರ್ಜ್ಗೆ ದುಡ್ಡಿಗೆ ಏನೂ ಕೊರತೆ ಇಲ್ಲ. ಜಾರ್ಜ್ಗೆ ಹೈಕಮಾಂಡ್ ನವರು ಏನಾದರೂ ಫಿಕ್ಸ್ ಮಾಡಿದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.


