ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ (BPL) ಪಡಿತರ ಚೀಟಿ ಪಡೆಯಲು ನಿಗದಿಪಡಿಸಲಾಗಿರುವ ವಾರ್ಷಿಕ ಆದಾಯದ ಮಿತಿಯನ್ನು ಪ್ರಸ್ತುತ ಇರುವ ₹1.20 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ಹಂಚಿಕೊಂಡರು.
ಆದಾಯ ಮಿತಿ ಹೆಚ್ಚಳ: ಆಡಳಿತಾತ್ಮಕ ಸುಧಾರಣಾ ಆಯೋಗದ ಶಿಫಾರಸಿನಂತೆ ಬಿಪಿಎಲ್ ಕಾರ್ಡ್ಗೆ ಅರ್ಹತೆ ಪಡೆಯುವ ವಾರ್ಷಿಕ ಆದಾಯದ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಪ್ರಕ್ರಿಯೆ ನಡೆಯುತ್ತಿದೆ.
ಯಾವ ಕಾರ್ಡ್ಗಳೂ ರದ್ದಾಗಲ್ಲ: ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಪಡಿತರ ಚೀಟಿಗಳ ಪರಿಶೀಲನೆ ನಡೆಯುತ್ತಿದ್ದು, ಅರ್ಹರ ಕಾರ್ಡ್ ರದ್ದುಪಡಿಸುವುದಿಲ್ಲ. ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಮಾತ್ರ ಎಪಿಎಲ್ (APL) ವರ್ಗಕ್ಕೆ ಬದಲಾಯಿಸಲಾಗುತ್ತಿದೆ ಎಂದರು.
ರಾಜ್ಯದ ಸುಮಾರು 4.42 ಕೋಟಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಪಡಿತರ ತಲುಪಿಸಲಾಗುತ್ತಿದೆ. ಪಡಿತರ ಅಕ್ರಮ ತಡೆಯಲು ಗೋದಾಮುಗಳಿಗೆ ಸಿಸಿಟಿವಿ ಮತ್ತು ಪಡಿತರ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅಕ್ರಮ ಮಾರಾಟ ಸಂಬಂಧ 1,497 ಎಫ್ಐಆರ್ ದಾಖಲಿಸಲಾಗಿದ್ದು, ₹50 ಕೋಟಿ ಮೌಲ್ಯದ ಪಡಿತರ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಂದಿನ ಎರಡು ತಿಂಗಳಲ್ಲಿ ಸುಮಾರು ₹6,000 ಕೋಟಿ ವೆಚ್ಚದಲ್ಲಿ ‘ಇಂದಿರಾ ಕಿಟ್’ ವಿತರಿಸಲು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ರಾಜ್ಯದ 20,259 ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ತೆರೆದಿರಬೇಕು. ಯಾವುದೇ ಲೋಪ ಕಂಡುಬಂದಲ್ಲಿ ಸಾರ್ವಜನಿಕರು 1967 ಸಹಾಯವಾಣಿಗೆ ದೂರು ನೀಡಬಹುದು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
