ತಿಪಟೂರು: ವೈದ್ಯಕೀಯ ಪರೀಕ್ಷೆ ನಡೆಸಿ ಎರಡು ವರ್ಷ ಕಳೆದಿದೆ. ಆರು ತಿಂಗಳಿನಿಂದ ಸ್ಯಾನಿಟರಿ ಪ್ಯಾಡ್ ನೀಡಿಲ್ಲ. ಊಟ ಬಡಿಸುವಾಗ ಅಡುಗೆಯವರು ನಮ್ಮನ್ನು ನೀವು ಬಿಕಾರಿಗಳು ಎಂದು ನಿಂದಿಸುತ್ತಾರೆ ಎಂದು ಇಂದಿರಾ ನಗರದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ನ ವಿದ್ಯಾರ್ಥಿನಿಯರು ನೋವು ತೋಡಿಕೊಂಡಿದ್ದಾರೆ.
ಉಪಲೋಕಾಯುಕ್ತ ಬಿ.ವೀರಪ್ಪ ಅವರು ಜಿಲ್ಲೆಯ ವಿವಿಧೆಡೆಗಳಿಗೆ ತೆರಳಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನ ಮಾಡುತ್ತಿದ್ದಾರೆ. ಅಂತೆಯೇ ಶುಕ್ರವಾರ ರಾತ್ರಿ ಅವರು ದಿಢೀರ್ ಆಗಿ ಹಾಸ್ಟೆಲ್ ಗೆ ಭೇಟಿ ನೀಡಿ ವೇಳೆ ವಿದ್ಯಾರ್ಥಿನಿಯರಿಂದ ದೂರಿನ ಸರಮಾಲೆಯೇ ಕೇಳಿ ಬಂತು.
ಹಾಸ್ಟೆಲ್ ನ ಅವ್ಯವಸ್ಥೆಯನ್ನು ಕಣ್ಣಾರೆ ಕಂಡ ಉಪಲೋಕಾಯುಕ್ತ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತರಾಟೆಗೆತ್ತಿಕೊಂಡರು.
ಕೊಪ್ಪಳದ ವಸತಿ ಶಾಲೆಯಲ್ಲಿ 9ನೇ ತರಗತಿ ಬಾಲಕಿಗೆ ಹೆರಿಗೆಯಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಿದರೂ ಆಕೆ ಗರ್ಭಿಣಿ ಆಗಿರುವುದನ್ನು ಪತ್ತೆ ಹಚ್ಚಲು ಆಗಿಲ್ಲ. ಈ ಹಾಸ್ಟೆಲ್‌ನಲ್ಲಿ ಪರೀಕ್ಷೆಯೇ ನಡೆಸಿಲ್ಲ. ಸ್ಯಾನಿಟರಿ ಪ್ಯಾಡ್ ಬಂದಿಲ್ಲ ಎಂದು ಸರ್ಕಾರಕ್ಕೆ ಎಲ್ಲಿ ಪತ್ರ ಬರೆದಿದ್ದೀರಾ, ಜ್ಞಾನ ಬೇಡವೇ, ನಾಚಿಕೆ ಆಗಲ್ಲವೇ ನಿಮಗೆ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಹೀಗೆ ನಡೆಸಿಕೊಳ್ಳುತ್ತೀರಾ ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆತ್ತಿಕೊಂಡರು.
ವಿದ್ಯಾರ್ಥಿನಿಯರು ಚೆನ್ನಾಗಿ ಓದಿ ಗುರಿ ಸಾಧಿಸಬೇಕು. ಪ್ರೀತಿ, ಪ್ರೇಮ ಎಂದು ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಇದೇ ವೇಲೆ ವಿದ್ಯಾರ್ಥಿನಿಯರಿಗೂ ಸಲಹೆ ನೀಡಿದರು. ಹಾಸ್ಟೆಲ್ ಬಳಿ ಪೊಲೀಸ್ ಬೀಟ್ ಹೆಚ್ಚಿಸುವಂತೆ ಸೂಚಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ, ಹಲವು ವರ್ಷಗಳ ಹಳೆಯ ಹಾಸಿಗೆ, ದಿಂಬು ಕಂಡು ಅಸಮಾಧಾನ ಹೊರ ಹಾಕಿದರು. ‘ಇಂತಹ ದಿಂಬಿನ ಮೇಲೆ ನೀವು ಮಲಗುತ್ತೀರಾ? ಎಷ್ಟು ದಿನ ಆಯ್ತು ಈ ದಿಂಬು ಕೊಟ್ಟು, ಚಾಪೆ ಮೇಲೆ ಮಕ್ಕಳು ಹೇಗೆ ಮಲಗಿಕೊಳ್ಳಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಮೂರು ವರ್ಷದಿಂದ ಹಾಸಿಗೆ, ದಿಂಬು ಬಂದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ಕೃಷ್ಣಪ್ಪ ಪ್ರತಿಕ್ರಿಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


