ತಿಪಟೂರು: ಪಿ.ಯು.ಸಿ. ನಂತರ ಮುಂದೇನು? ಎಂಬ ಪ್ರಶ್ನೆಗೆ ನಮ್ಮ ವಿದ್ಯಾರ್ಥಿಗಳಲ್ಲಿಯೇ ಉತ್ತರವಿರುವುದಿಲ್ಲ. ಜ್ಞಾನದ ಶಾಖೆಗಳು ವಿಸ್ತಾರವಾಗಿದ್ದು, ಅವುಗಳ ಬಗ್ಗೆ ಪೂರ್ಣ ಮಾಹಿತಿ ಪಡೆದು, ವಿದ್ಯಾರ್ಥಿಯು ತನಗೆ ಇಷ್ಟವಾದ, ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮುಂದುವರೆಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಎಂ.ಡಿ.ಶಿವಕುಮಾರ್ ನುಡಿದರು. ಅವರು ಇಂದು ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನ ಸೈನ್ಸ್ ಫೆಸ್ಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸ್ವರ್ಣಗೌರಮ್ಮ ಸಮಾಜ ಸೇವಕರು ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿಆಗಮಿಸಿದ್ದ ತುಮಕೂರಿನ ‘ವೇಗಸ್ ನೀಟ್ ಅಕಾಡೆಮಿ’ಯ ನಿರ್ದೇಶಕರಾದ ಡಾ. ದೇವಿಪ್ರಿಯಾರವರು ಪಿ.ಯು.ಸಿ. ನಂತರ ಉನ್ನತ ವ್ಯಾಸಂಗಕ್ಕೆ ಅವಕಾಶಗಳಿರುವ ಕೋರ್ಸ್‌ಗಳನ್ನು ಮತ್ತು ಆಯ್ಕೆಯ ಪರೀಕ್ಷಾ ವಿಧಾನಗಳನ್ನು ಆಕರ್ಷಕ ಶೈಲಿಯಲ್ಲಿ ವಿವರವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ.ಬಸವರಾಜಪ್ಪ ತಾಲೂಕು ಕ.ಸಾ.ಪ. ಅಧ್ಯಕ್ಷರು ಕಳೆದ ಬಾರಿ ಎಸ್.ಎಸ್.ಎಲ್.ಸಿ. ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಗೌರವಿಸಿ, ವಿವಿಧ ಕಾರಣಗಳಿಂದ ಹಲವು ವಿದ್ಯಾರ್ಥಿಗಳು ಫೇಲ್ ಆದರೆ ಚಿಂತೆ ಬೇಡ ಅವರಿಗೂ ವಿಪುಲವಾದ ಉತ್ತಮ ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ಶುಭ ಕೋರಿದರು.
ಶ್ರೀ ಗೋವಿಂದರಾಜು ರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ತಾಳ್ಮೆ, ಜಾಣ್ಮೆ ಗಳಿದ್ದರೆ ಯಶಸ್ಸು ಲಭಿಸುತ್ತದೆ ಎಂದರು.
ಜಿಲ್ಲೆಯ ಪದವಿ ಪೂರ್ವ ಕಾಲೇಜು ಇಲಾಖೆಯಿಂದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರಾದ ಡಾ.ಕೆ.ಲೋಕೇಶ್ ರವರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಲವು ಮಾದರಿಗಳ ಪ್ರದರ್ಶನ ಮಾಡಿ ವಿವರಣೆ ನೀಡಿದರು.
ಸಭೆಯಲ್ಲಿ ಸೈನ್ಸ್ ಕ್ಲಬ್ ಸಹ ಕಾರ್ಯದರ್ಶಿ ಮಂಜುನಾಥ್, ಉಪನ್ಯಾಸಕರಾದ ವಿಶ್ವನಾಥ್, ನೌಶೀನ್ ತರನುಮ್, ಕುಸುಮ, ಮೈಲಾರಪ್ಪ, ವಾಣಿಶ್ರೀ ಪೃಥ್ವಿ, ತಿಪ್ಪೇಸ್ವಾಮಿ, ವಸಂತ ಲಕ್ಷ್ಮಿ, ಮಧುಸೂದನ್, ಕ.ಸಾ.ಪ. ಕಾರ್ಯದರ್ಶಿಗಳಾದ ಬಿ. ನಾಗರಾಜು, ಹೆಚ್.ಎಸ್ . ಮಂಜಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC