ತುಮಕೂರು: ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕುಣಿಗಲ್ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಕಾಣೆಯಾಗಿದ್ದಾರೆ ಎಂಬ ಬಿತ್ತಿಪತ್ರಗಳನ್ನು ಹಾಗೂ ಮಳೆ ನೀರಿನಿಂದ ತುಂಬಿರುವ ರಸ್ತೆ ಗುಂಡಿಗಳ ಬಿತ್ತಿ ಪತ್ರಗಳನ್ನು ಹಿಡಿದು ಜನರು ಬೀದಿಗೆ ಇಳಿದಿದ್ದರು. ಸಂಚಾರ ಅಡ್ಡಗಟ್ಟಿ ರಸ್ತೆಸರಿಪಡಿಸುವಂತೆ ಅಧಿಕಾರಿ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಹಲವು ವರ್ಷಗಳಿಂದ ಮುಖ್ಯರಸ್ತೆ ಹಾಳಾಗಿದ್ದು ಮಳೆ ಬಂದರೆ ಇನ್ನಿಲ್ಲದ ತೊಂದರೆಗಳು ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕುಣಿಗಲ್ ರಸ್ತೆಯ ಹೇಮಾವತಿ ನೀರಾವರಿ ಕಚೇರಿ ಮುಂದೆ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದರು. ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರು.
ಸ್ಥಳಕ್ಕೆ ಸಂಬಂಧಿಸಿದ ರಾಜಕೀಯ ಜನಪ್ರತಿನಿಧಿಗಳು ಅಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು. ಇದರಿಂದಾಗಿ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ನಿಂದ ಸಾರ್ವಜನಿಕರು ಪರದಾಡುವಂತಾಯಿತು. ನಂತರ ಪೊಲೀಸರ ಮಧ್ಯಪ್ರವೇಶದಿಂದ ಪ್ರತಿಭಟನಾಕಾರರು ಧರಣಿಯನ್ನು ಹಿಂದಕ್ಕೆ ಪಡೆದರು.