ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ.
ರಾಷ್ಟ್ರೀಯ ಹೆದ್ದಾರಿ 275ರ ಏಳನೇ ಹೊಸಕೋಟೆ- ಆನೆಕಾಡು ಭಾಗದಲ್ಲಿ ರಸ್ತೆಯ ಮಧ್ಯದಲ್ಲಿಯೇ ದನಗಳು ಮಲಗುತ್ತಿವೆ. ಇದರಿಂದಾಗಿ ವಾಹನ ಸವಾರರಿಗೆ ದಿಢೀರನೇ ಜಾನುವಾರುಗಳು ಎದುರಾಗುತ್ತಿದ್ದು, ಪರಿಣಾಮವಾಗಿ ಅಪಘಾತಗಳು ಸಂಭವಿಸುತ್ತಿವೆ. ಹಲವರು ಹೀಗೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಜಾನುವಾರುಗಳು ಕೂಡ ಅಪಘಾತದಲ್ಲಿ ಮೃತಪಟ್ಟಿವೆ.
ರಾಷ್ಟ್ರೀಯ ಹೆದ್ದಾರಿ ಬಳಿಯ ಹೊಸಕೋಟೆ, ತೊಂಡೂರು, ಹೇರೂರು, ಮೆಟ್ನಳ್ಳ, ಉಪ್ಪುತೋಡು, ಬಸವನಹಳ್ಳಿ ಭಾಗದ ಜಾನುವಾರು ಮಾಲೀಕರು ತಮ್ಮ ಜಾನುವಾರುಗಳನ್ನು ಮೇಯಲು ರಸ್ತೆಗೆ ಬಿಡುತ್ತಿದ್ದಾರೆ. ಈ ನಡುವೆ ನಾಕೂರು ಶಿರಂಗಾಲ, ಹೇರೂರು ಭಾಗದಿಂದಲೂ ಜಾನುವಾರುಗಳು ಕಾಡಿನೊಳಗೆ ಮೇಯುತ್ತಾ ರಸ್ತೆಗೆ ಬರುತ್ತಿವೆ. ಮಳೆ ಮತ್ತು ಚಳಿ ಹೆಚ್ಚು ಇರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೆಚ್ಚನೆಯ ವಾತಾವರಣ ಇರುವ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಕಾಣಿಸಿಕೊಳ್ಳುತ್ತಿವೆ. ಬೆಳಗಿನ ಜಾವ ಮಂಜು ಕವಿದ ವಾತಾವರಣ ಮತ್ತು ಮಳೆಯ ಹನಿಯ ನಡುವೆ ಚಾಲಕರಿಗೆ ರಸ್ತೆ ಅಸ್ಪಷ್ಟವಾಗಿ ಕಾಣುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ.
ಅಪಘಾತಗಳು ಹೆಚ್ಚಾದಂತೆ ಗ್ರಾಮ ಪಂಚಾಯಿತಿ ಆ ದನಕರುಗಳ ಚಿತ್ರವನ್ನು ತೆಗೆದು ಮಾಲಿಕರಿಗೆ ಕಳುಹಿಸಿ ದಂಡ ವಿಧಿಸಿದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ.
ದನಗಳ ಮಾಲೀಕರು ವಯಸ್ಸಾದ ಮತ್ತು ಹಾಲು ಕೊಡದ ರಾಸುಗಳನ್ನು ನಿರ್ಲಕ್ಷಿಸಿ ರಸ್ತೆಗೆ ಬಿಟ್ಟಿರುವುದರಿಂದ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಈ ರಾಸುಗಳಿಗೆ ಕೊಡಲು ಮೇವಿನ ಕೊರತೆ ಇರುವುದರಿಂದ ಅದರ ಮಾಲೀಕರು ಈ ದನಗಳನ್ನು ಕಾಡಿಗಟ್ಟುತ್ತಿದ್ದಾರೆ ಎಂದು ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


