ಬೆಳಗಾವಿ : ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಜನವರಿ 15 ರಂದು ಬೃಹತ್ ಯೋಗಥಾನ್-2023 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಯೋಗಥಾನ್-2023 ಪೂರ್ವಸಿದ್ಧತೆ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜ.6) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಮುಂಚೆ 80 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಲಾಗಿತ್ತು. ಇದೀಗ ಈ ಸಂಖ್ಯೆಯನ್ನು 20 ಸಾವಿರಕ್ಕೆ ಮಿತಿಗೊಳಿಸಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.ಜ.15 ರಂದು ಬೆಳಿಗ್ಗೆ 6 ಗಂಟೆಯಿಂದ ಯೋಗಪಟುಗಳ ನೋಂದಣಿ ಯೊಂದಿಗೆ ಕಾರ್ಯಕ್ರಮ ಅರಂಭಗೊಳ್ಳಲಿದೆ.
ಯೋಗಥಾನ್ ಏರ್ಪಡಿಸಲು ಸುವರ್ಣ ವಿಧಾನಸೌಧದ ಆವರಣದಲ್ಲಿ ವೇದಿಕೆ, ಮ್ಯಾಟಿಂಗ್, ಧ್ವನಿ ವ್ಯವಸ್ಥೆ ಮತ್ತಿತರ ಅಗತ್ಯ ವ್ಯವಸ್ಥೆ ಕುರಿತು ಚರ್ಚೆ ನಡೆಸಿದ ಅವರು, ಲಭ್ಯವಿರುವ ಅನುದಾನದಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಯೋಗಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವ 20 ಸಾವಿರ ಯೋಗಪಟುಗಳಿಗೆ ಪ್ರತಿ 50 ಜನಕ್ಕೆ ಒಬ್ಬರಂತೆ ಒಟ್ಟು 400 ಸ್ಟಿವರ್ಡ್ ಗಳನ್ನು, ಎನ್.ಎಸ್.ಎಸ್., ಎನ್.ಸಿ.ಸಿ. ಸ್ಕೌಟ್ಸ್-ಗೈಡ್ಸ್, ಭಾರತ ಸೇವಾದಳ ಮತ್ತು ಇತರೆ ಯೋಗ ಸಂಸ್ಥೆಗಳಿಂದ ನೇಮಿಸಬೇಕು ಎಂದು ತಿಳಿಸಿದರು.
ಸುವರ್ಣ ವಿಧಾನಸೌಧದ ಆವರಣದಲ್ಲಿ ಅಂದಾಜು 20 ಸಾವಿರ ಯೋಗಪಟುಗಳು ಸೇರಲಿದ್ದಾರೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಕುಡಿಯುವ ನೀರು, ಸ್ವಚ್ಛತೆ ಮತ್ತಿತರ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಜಿನೇಶ್ವರ ಪಡನಾಡ ಅವರು, ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿಯನ್ನು ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ನಾಲತವಾಡ, ಡಿಡಿಪಿಯು ಎಂ.ಎಂ.ಕಾಂಬಳೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಲಕ್ಷ್ಮಣ ಬಬಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ, ಜಿಲ್ಲಾ ಯೋಗಾ ಸಂಯೋಜಕಿ ಆರತಿ ಸಂಕೇಶ್ವರಿ, ಕೆ.ಎಲ್.ಇ ಸಂಸ್ಥೆಯ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಸಂದೀಪ ಸಗರೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


