ಭಾರಿ ಮಳೆಗೆ ಒಡಿಶಾದ ಆರು ಜಿಲ್ಲೆಗಳಲ್ಲಿ ಸಿಡಿಲಾಘಾತಕ್ಕೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಖುರ್ದಾ ಜಿಲ್ಲೆಯಲ್ಲಿ ನಾಲ್ವರು, ಬೋಲಂಗಿರ್ ನಲ್ಲಿ ಇಬ್ಬರು ಸೇರಿದಂತೆ ಅಂಗುಲ್, ಬೌದ್, ಜಗತ್ ಸಿಂಗ್ ಪುರ ಮತ್ತು ಧೆಂಕನಾಲ್ ಎಂಬಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಖುರ್ದಾದಲ್ಲಿ ಮೂವರು ಗಾಯಗೊಂಡಿದ್ದಾರೆ. ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಸೇರಿದಂತೆ ಒಡಿಶಾದ ಕರಾವಳಿ ಪ್ರದೇಶದಲ್ಲಿ ನಿನ್ನೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ. ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.


