ಜಮ್ಮುವಿನ ರಜೌರಿಯಲ್ಲಿ ಭಯೋತ್ಪಾದಕರೊಂದಿಗಿನ ಎನ್ ಕೌಂಟರ್ ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಭಯೋತ್ಪಾದಕನನ್ನು ಕೊಂದಿರುವುದಾಗಿ ಭದ್ರತಾ ಪಡೆಗಳು ಹೇಳಿಕೊಂಡಿವೆ. ಕ್ಯಾಪ್ಟನ್ ಎಂವಿ ಪ್ರಾಂಜಲ್, ಕ್ಯಾಪ್ಟನ್ ಸುಭಮ್, ಜೂನಿಯರ್ ಕಮಿಷನ್ಡ್ ಆಫೀಸರ್ ಮತ್ತು 9 ಪ್ಯಾರಾ ವಿಶೇಷ ಪಡೆಯ ಯೋಧ ಪ್ರಾಣ ಕಳೆದುಕೊಂಡಿದ್ದಾರೆ.
ಧರ್ಮಶಾಲ್ ನ ಬಾಜಿ ಮಾಲ್ ಅರಣ್ಯದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಭಯೋತ್ಪಾದಕರನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಉಗ್ರಗಾಮಿ ಗುಂಪು ವಿದೇಶಿಗರು ಎಂಬ ಸುಳಿವು ಸಿಕ್ಕಿದೆ. ಅವರಿಗೂ ಗಾಯಗಳಾಗಿವೆ. ಮೇಜರ್ ಸೇರಿದಂತೆ 2 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉಧಂಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಯೋತ್ಪಾದಕರು ಕಾಣಿಸಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಸೇನೆ ಮತ್ತು ಪೊಲೀಸರು ಅರಣ್ಯದಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಬುಧವಾರ ಬೆಳಗ್ಗೆ ಉಗ್ರರು ಸೇನಾ ತಂಡದ ಮೇಲೆ ಗುಂಡಿನ ದಾಳಿ ನಡೆಸಿದಾಗ ಎನ್ ಕೌಂಟರ್ ಆರಂಭವಾಗಿದೆ. ಗುಂಪಿನಲ್ಲಿರುವ ಇತರ ಭಯೋತ್ಪಾದಕರ ಪತ್ತೆಗೆ ಅರಣ್ಯ ಆಧಾರಿತ ಶೋಧ ನಡೆಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.


