ಇದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಡ ಮಕ್ಕಳ ಶಾಲೆ. ಕೊರಟಗೆರೆ ವಿಧಾನಸಭಾ ಕ್ಷೇತ್ರ ಕೋರ ಹೋಬಳಿಯ ಬೆಳಧರ ಗ್ರಾಮದ ಸರ್ಕಾರಿ ಶಾಲೆ ಇದೀಗ ಅಕ್ಷರಶಃ ಅನಾಥವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ, ಕೊರಟಗೆರೆ ಕ್ಷೇತ್ರದಲ್ಲೇ ಗೃಹ ಸಚಿವರಿದ್ದರೂ, ಅಧಿಕಾರಿಗಳು ಕಾನೂನಿಗೆ ಸರಿಯಾಗಿ ಕಾರ್ಯ ನಿರ್ವಹಿಸದೇ ಜಿಲ್ಲಾಡಳಿತಕ್ಕೆ ಕಳಂಕ ತರುತ್ತಿದ್ದಾರೆ. ಇಂತಹ ಅಧಿಕಾರಿಗಳು ಜಿಲ್ಲೆಯಲ್ಲಿದ್ದು ಏನು ಪ್ರಯೋಜನ? ಎಂದು ಪ್ರಶ್ನಿಸುವಂತಾಗಿದೆ.

ಇಲ್ಲಿನ ಮಕ್ಕಳು ಪ್ರತಿದಿನ ಶಬ್ದ ಮಾಲಿನ್ಯದಿಂದ ಬಳಲುತ್ತಾ ಪಾಠ ಕೇಳುವ ಸ್ಥಿತಿ ಇಲ್ಲಿಯದ್ದಾಗಿದೆ. ಶಾಲೆಗೆ ಹೊಂದಿಕೊಂಡಂತಿರುವ ಕಲ್ಯಾಣ ಮಂಟಪದಲ್ಲಿ ವಾದ್ಯ ಮೇಳಗಳ ಗದ್ದಲದ ನಡುವೆ ಶಾಲೆಯ ಮಕ್ಕಳು ಇಲ್ಲಿ ಓದುವಂತಹ ದುಸ್ಥಿತಿ ಇಲ್ಲಿಯದ್ದಾಗಿದೆ. ಪರೀಕ್ಷೆಗಳು ನಡೆಯುತ್ತಿದ್ದರೂ, ಕಲ್ಯಾಣ ಮಂಟಪದ ವಾದ್ಯಗಳ ಸದ್ದಿಗೆ ಕಿರಿಕಿರಿ ಅನುಭವಿಸುತ್ತಾ ವಿದ್ಯಾರ್ಥಿಗಳು ಪಾಠ ಕೇಳುವಂತಿದೆ. ದಿನಾ ಸಾಯುವವರಿಗೆ ಅಳುವವರು ಯಾರು ಅನ್ನೋ ಗಾದೆ ಮಾತಿನಂತೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಶಾಲೆಗೆ ಹೇಳುವವರು ಕೇಳುವವರು ಯಾರೂ ಇಲ್ಲ ಎನ್ನುವಂತಾಗಿದೆ.
ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವ್ಯಾಪ್ತಿಗೆ ಹೊಂದಿಕೊಂಡಂತೆ ಎರಡು ಎಕರೆ ಭೂಮಿ ಗ್ರಾಮಠಾಣಾಗೆ ಸೇರಿದ್ದು, ರಾಜ್ಯ ಸರ್ಕಾರ ಶಾಲಾ ಮಕ್ಕಳ ಆಟದ ಮೈದಾನದ ಉದ್ದೇಶಕ್ಕಾಗಿ 3 ಎಕರೆ ಮೂರು ಗಂಟೆ ಜಮೀನು ಮಂಜೂರು ಮಾಡಿದ್ದು, ಸುಮಾರು ನಾಲ್ಕೈದು ಬಾರಿ ಕಂದಾಯ ಇಲಾಖೆಯಿಂದ ಸರ್ವೇ ಮಾಡಿ ಹದ್ದುಬಸ್ತು ಮಾಡಲಾಗಿದೆ ಹಾಗೂ ಇ ಸ್ವತ್ತು ಸಹ ಮಾಡಲಾಗಿದೆ.
ಶಾಲೆ ಮೈದಾನದ ಪಕ್ಕದಲ್ಲಿ ಒಬ್ಬ ಖಾಸಗಿ ವ್ಯಕ್ತಿಗೆ ಸೇರಿದ ಕಲ್ಯಾಣ ಮಂಟಪವಿದ್ದು, ಕಲ್ಯಾಣ ಮಂಟಪದ ಮಾಲೀಕ ಶಾಲಾ ಮೈದಾನವನ್ನು ಭೂ ಕಬಳಿಕೆ ಮಾಡಿಕಂಡು ಕಲ್ಯಾಣ ಮಂಟಪಕ್ಕೆ ವಾಹನಗಳ ಅಕ್ರಮ ನಿಲ್ದಾಣವಾಗಿ ಮಾಡಿಕೊಂಡಿದ್ದಾನೆ. ಈ ಕಲ್ಯಾಣ ಮಂಟಪಕ್ಕೆ ಆಗಮಿಸುವ ವಾಹನಗಳ ಚಾಲಕರು ಶಾಲಾ ಮೈದಾನದಲ್ಲಿ ವಿಪರೀತ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆ ಮಾಡಿಕೊಂಡು ಬಂದು ವಿದ್ಯಾರ್ಥಿಗಳ ಮೇಲೆಯೇ ವಾಹನ ಹತ್ತಿಸುವಂತಹ ಹಲವು ಘಟನೆಗಳು ಇಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಂತಹ ಘಟನೆಗಳು ನಡೆದಿವೆ.
ಶಾಲಾ ಅಭಿವೃದ್ಧಿಗಾಗಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಮಕ್ಕಳ ಹಿತದೃಷ್ಟಿಯಿಂದ ಆಟದ ಮೈದಾನದ ಸುತ್ತಲೂ ತಂತಿ ಬೇಲಿ ನಿರ್ಮಾಣ ಕಾಮಗಾರಿಗೆ ಸುಮಾರು ಐದು ಲಕ್ಷ ರೂಪಾಯಿ ಮಂಜೂರು ಮಾಡಿದ್ದರೂ ಸಹ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಇನ್ನೂ ಕಾಂಪೌಂಡ್ ನಿರ್ಮಿಸದೇ ಕಾಲಹರಣ ಮಾಡುತ್ತಿದ್ದಾರೆ.
ಈ ನಡುವೆ, ಮಾರ್ಚ್ 14ರ ದಿನದಂದು ಒಂದೆಡೆ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದು, ಮತ್ತೊಂದೆಡೆ ಶಾಲೆಯಲ್ಲಿ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಕಲ್ಯಾಣ ಮಂಟಪದಲ್ಲಿ ವಾದ್ಯ ಮೇಳಗಳ ಸದ್ದಿನ ನಡುವೆಯೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದು ಕಂಡು ಬಂತು. ಇಂತಹ ದುಸ್ಥಿತಿ ಯಾವುದೇ ಜಿಲ್ಲೆಯಲ್ಲಿ ಕಾಣಲು ಸಾಧ್ಯವಿಲ್ಲ. ಈ ದೃಶ್ಯ ಅಧಿಕಾರಿಗಳ ನೆರಳಿನಲ್ಲೇ ಮದುವೆ ನಡೆಯುವಂತೆ ಕಂಡು ಬಂತು.
ಇನ್ನೂ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ, ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಗೃಹ ಸಚಿವರ ತವರಿನಲ್ಲಿ ಹಲವು ವರ್ಷಗಳಿಂದ ಈ ಶಾಲೆಯ ಮಕ್ಕಳು ಖಾಸಗಿ ವ್ಯಕ್ತಿಗಳಿಂದಾಗಿ ನರಳುತ್ತಿದ್ದು, ಇನ್ನೂ ಕೂಡ ಈ ಸಮಸ್ಯೆಗೆ ಪರಿಹಾರ ಸಿಗದಿರುವುದು ವಿಷಾದನೀಯವಾಗಿದೆ. ಅಧಿಕಾರಿಗಳಿಂದ ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಚಿವರು ಖುದ್ದಾಗಿ ಪರಿಶೀಲಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಈಗಾಗಲೇ ಈ ಶಾಲೆಯ ದುಸ್ಥಿತಿಯ ವಿರುದ್ಧ ಕಾಳಜಿ ತಂಡದ ನೇತೃತ್ವದಲ್ಲಿ ಬೆಳೆಧರ ಶಾಲೆ ಮೈದಾನ ಉಳಿವಿಗಾಗಿ ‘ಮೌನ ಮೆರವಣಿಗೆ ಜಾಥಾ’ ನಡೆಸಲಾಗಿತ್ತು. ಈ ಹೋರಾಟಕ್ಕೆ ನೈಜ ಹೋರಾಟಗಾರರ ವೇದಿಕೆ ಬೆಂಗಳೂರು, ಲಂಚಮುಕ್ತ ಕರ್ನಾಟಕ ಬೆಂಗಳೂರು, ಭೀಮ್ ಆರ್ಮಿ, ಕರುನಾಡು ವಿಜಯ ಸೇನೆ, ರಣಧೀರ ವೇದಿಕೆ, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಕೈ ಜೋಡಿಸಿತ್ತು. ನಿರಂತರ ಹೋರಾಟ ನಡೆದರೂ, ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಪರ ನಿಂತು ವಿದ್ಯಾರ್ಥಿಗಳಿಗೆ ನಿರಂತರ ಅನ್ಯಾಯ ಮಾಡುತ್ತಿರುವುದು ಕಾರ್ಯಾಂಗಕ್ಕೆ ಕಪ್ಪುಚುಕ್ಕೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


