ನಾನು ಈ ಲೇಖನವನ್ನು ಬರೆಯುತ್ತಿರುವ ಸಂದರ್ಭದಲ್ಲಿ ಈ ಹಿಂದೆ ಆತ್ಮಗಳಿಗೆ ಸಂಬಂಧಿಸಿದಂತೆ ಯಾವ ಲೇಖನವನ್ನೂ ಓದಿರುವುದಿಲ್ಲ ಎಂದು ಸ್ಪಷ್ಟೀಕರಣ ಮಾಡುತ್ತಾ ಪ್ರಾರಂಭಿಸುತ್ತೇನೆ. ಒಂದು ವೇಳೆ ನನ್ನ ಈ ಲೇಖನದ ಯಾವುದಾದರೂ ಒಂದು ಅಂಶ ಈ ಹಿಂದಿನ ಯಾರದಾದರೂ ಲೇಖನಕ್ಕೆ ಸಂಬಂಧಪಟ್ಟಿರುವುದು ಕಂಡುಬಂದರೆ ಅದು ಕಾಕತಾಳಿಯವಾಗಿರುತ್ತದೆ.
ವೈಯಕ್ತಿಕವಾಗಿ ತಿಳಿದಿರುವಂತೆ ನಾನು ಆತ್ಮಗಳಿಗೆ ಸಂಬಂಧಿಸಿದಂತೆ ನಮ್ಮ ಹಿರಿಯರು ಕೆಲವು ಸಂದರ್ಭಗಳಲ್ಲಿ ದೆವ್ವ ಎಂತಲೂ ಕರೆದಿದ್ದಾರೆ, ಇದಕ್ಕೆ ಅವರು ಕೊಡುತ್ತಿದ್ದ ಕಾರಣ ಯಾರಾದರೂ ಬದುಕಿನಲ್ಲಿ ತಮ್ಮದೇ ಕೆಲವು/ಹಲವು ಆಸೆಗಳನ್ನು ಇಟ್ಟುಕೊಂಡು ಆಯಸ್ಸು ತುಂಬುವ ಮೊದಲು ಯಾವುದಾದರೂ ಕಾರಣಕ್ಕೆ, ಅದು ಆತ್ಮಹತ್ಯೆಯಾಗಿರಲೂ ಬಹುದು ಅಥವಾ ಯಾರಿಂದಲಾದರೂ ಸಾವು ಸಂಭವಿಸರಲೂ ಬಹುದು ಈ ಕಾರಣಗಳಿಂದ ಅಸುನೀಗಿದರೆ ಅವರು ಬದುಕಿ ಉಳಿದಿರುವಷ್ಟು ಕಾಲ ಅಸುನೀಗಿದ ಸಮಯದಿಂದ ದೆವ್ವವಾಗಿ (ಅಂತರ ಪಿಶಾಚಿ) ಉಳಿದ ಆಯಸ್ಸನ್ನು ಕಳೆಯಬೇಕಾಗುತ್ತದೆ ಎಂದು ಹೇಳುತ್ತಿದ್ದರು. ನಂತರ ಪುನರ್ಜನ್ಮೋ ಅಥವಾ ಅವರ ಪಾಪದ ಕರ್ಮದನಿಮಿತ್ತ ನರಕವಾಸ ಅಥವಾ ಬೇರೊಂದು ಜೀವಿಯಾಗಿ ಹುಟ್ಟಿ ಶಿಕ್ಷೆ ಅನುಭವಿಸಬೇಕು ಎಂದು ಹಲವು ಸಂದರ್ಭಗಳಲ್ಲಿ ನಮ್ಮ ಹಿರಿಯರು ಹೇಳಿರುವುದು ನನಗೆ ನೆನಪಿದೆ.
ಈಗ ನಾನು ತಿಳಿಸುತ್ತಿರುವುದೇನೆಂದರೆ ನಾವು ಹಿಂದೂ ಧರ್ಮದ ನಂಬಿಕೆಯಂತೆ ಸ್ವರ್ಗ ನರಕಗಳ ಪರಿಕಲ್ಪನೆ ಇದರ ಬಗ್ಗೆ ನಂಬಿಕೆ ಇರುವವರಿಗೆ ಚೆನ್ನಾಗಿ ತಿಳಿದಿರುತ್ತದೆ. ಆದರೆ ಕೆಲವರು ದೇವರಿದ್ದಾನೆ ದೆವ್ವಗಳು ಇರುವುದಿಲ್ಲ ಎಂದು ನಂಬಿಕೆ ಇಟ್ಟರೆ ಮತ್ತೆ ಕೆಲವರು ದೇವರು ಇದೆ ಎಂದು ನಂಬುವುದಾದರೆ ದೆವ್ವಗಳೂ ಇರುತ್ತವೆ ಎಂದು ವಾದ ಮಾಡುತ್ತಾರೆ. ಇಲ್ಲಿ ನಾನು ಸ್ವರ್ಗ ನರಕದ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸುತ್ತಿಲ್ಲ ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು. ಈಗ ವಿಷಯಕ್ಕೆ ಬರುವುದಾದರೆ ನಾವು ಹಿಂದೂ ಧರ್ಮದಲ್ಲಿ ನಂಬಿರುವಂತೆ ನಮ್ಮ ಕರ್ಮಕ್ಕೆ ಅನುಗುಣವಾಗಿ ಸಾವಿನ ನಂತರ ಸ್ವರ್ಗ ಅಥವಾ ನರಕ ಪ್ರಾಪ್ತಿಯಾಗುವುದಾದರೆ, ಇದರ ಬಗ್ಗೆ ನಂಬಿಕೆ ಇರದ ಅಥವ ನಮ್ಮ ಸಿದ್ಧಾಂತ ಒಪ್ಪದ ಪಾಶ್ಚಿಮಾತ್ಯರು ತಮ್ಮ ಸಾವಿನ ನಂತರ ಅವರಿಗೆ ಏನು ಪ್ರಾಪ್ತಿಯಾಗುವುದು? ಅವರು ಹಳೆಯ ಮಹಲ್ ಗಳಲ್ಲಿ ರಾತ್ರಿಯ ವೇಳೆ ಕೆಲವು ವಿಚಿತ್ರ ಶಬ್ದಗಳು ಕೇಳಿಬರುತ್ತಿರುವ ವಿಷಯ ಕುರಿತ ಹಲವು ಲೇಖನಗಳನ್ನು ನಾವು ಅಲ್ಲಿ ಇಲ್ಲಿ ಓದಿರುತ್ತೇವೆ ಮತ್ತು ಅಂತಹ ಶಬ್ದಗಳು ಹಿಂದಿನ ಕೆಲವು ಮಹಾನ್ ವ್ಯಕ್ತಿಗಳ ಸಾವಿನ ನಂತರ ಆತ್ಮರೂಪದಲ್ಲಿ ಇರುವುದರ ಬಗ್ಗೆ ಹಲವು ಕಥೆಗಳನ್ನು (ನಿಜವೋ ಸುಳ್ಳೋ ಗೊತ್ತಿಲ್ಲ) ಆಸಕ್ತಿದಾಯಕವಾಗಿ ಓದಿರುತ್ತೇವೆ. ಹಾಗಾದರೆ ಅವರು ಆತ್ಮಗಳು ಇರುವಿಕೆಯನ್ನು ನಂಬಿದಂತೆ ಆಯ್ತು. ಹಾಗಾದರೆ ಅವರು ಬದುಕಿರುವಾಗ ಮಾಡಿದ ತಪ್ಪಿಗೆ ಅವರಿಗೆ ನರಕವಾಸವಿಲ್ಲವೇ? ವಿಜ್ಞಾನ ಕೇವಲ ಕಣ್ಣಿಗೆ ಕಾಣುವ ಬಗ್ಗೆ ಸಂಶೋಧನೆ ಮಾಡುತ್ತದೆಯೇ ಹೊರತು, ಕಣ್ಣಿಗೆ ಕಾಣದ ಅತೀಂದ್ರೀಯ ಶಕ್ತಿಗಳ ಬಗ್ಗೆ ಏನು ಹೇಳಲೂ ಸಾಧ್ಯವಿಲ್ಲ ಹೇಳಿದರೆ ಸಂಶೋಧಕರ ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ ಕೇವಲ ಊಹಾಪೋಹವಾಗುತ್ತದೆ, ಒಬ್ಬೊಬ್ಬರ ಹೇಳಿಕೆ ಒಂದೊಂದು ರೀತಿ ಇರುತ್ತದೆ ಹೀಗಿರುವಾಗ ವಿಜ್ಞಾನ ಕೇವಲ ಒಂದು ಪರ ನಿಲ್ಲಬೇಕಾದರೆ ಅದು ಸಾರ್ವಕಾಲಿಕ ಒಪ್ಪುವಂತೆ ಇರಬೇಕು.
ಇಲ್ಲಿ ಒಂದು ವಿಷಯದ ಬಗ್ಗೆ ಚಿಂತಿಸುವಾಗ ನನ್ನ ಚಿಂತನಗೆ ಬಂದಿದ್ದು ಓರ್ವ ವ್ಯಕ್ತಿ ಅಸುನೀಗಿದ ನಂತರ ಆತನ ಮೆದುಳು ನಿಷ್ಕ್ರಿಯಗೊಂಡ ತಕ್ಷಣ ಆತ ಎಲ್ಲವನ್ನು ಮರೆಯುತ್ತಾನೆ, ತಾನು ಬದುಕಿ ಬಾಳಿದ ಎಲ್ಲವೂ ಅಳಿಸಿದಂತೆ ಆಗಬಹುದು, ಮತ್ತು ಆತನ ದೇಹದ ಶಾಖ ಪ್ರಕೃತಿಯಲ್ಲಿ ಲೀನವಾಗಿ ಹೋಗುತ್ತದೆ. ಎಂದುಕೊಳ್ಳಬಹುದು. ಆ ವ್ಯಕ್ತಿಗೆ ಮುಂದೆ ನಡೆಯುವ ಯಾವ ಪ್ರಕ್ರಿಯೆಯೂ ತಿಳಿಯುವುದಿಲ್ಲ. ಮತ್ತೊಂದು ಚಿಂತನೆಯಂತೆ ದೇಹದಿಂದ ಆತ್ಮ ಬೇರ್ಪಟ್ಟಮೇಲೆ ವ್ಯಕ್ತಿ ತಾನೊಂದು ಕನಸಿನಲ್ಲಿ ಇರುವಂತೆ ಭಾಸವಾಗಬಹುದು, (ಇಲ್ಲಿ ನಾವು ಬದುಕಿದ್ದಾಗ ನಮ್ಮ ಮನಸ್ಸನ್ನು ನಮ್ಮ ದೇಹವನ್ನು ಆಳುತ್ತಿರುವ ಆತ್ಮ ಎಂದು ಅಂದುಕೊಳ್ಳೋಣ ಏಕೆಂದರೆ ನಿರ್ಜೀವ ದೇಹ ಏನು ಮಾಡಲಾಗದು, ದೇಹಕ್ಕೆ ಆತ್ಮದ ಅವಶ್ಯಕತೆ ಇದ್ದರೆ, ಆತ್ಮಕ್ಕೆ ದೇಹದ ಅವಶ್ಯಕತೆ ಇರುತ್ತದೆ.) ಹಾಗೂ ಎಚ್ಚರವಾಗಲು ಶತಾಯ ಗತಾಯ ಎಷ್ಟು ಪ್ರಯತ್ಮಪಟ್ಟರೂ ಸಾಧ್ಯವಾಗದಂತೆ ಆಗಬಹುದು, ಅಯ್ಯೋ ಇದೇಕೆ ಹೀಗೆ ಆಗುತ್ತಿದೆ ಅನ್ನಿಸಬಹುದು. ಲೌಕಿಕ ಜಗತ್ತನ್ನು ನೋಡುತ್ತಿರುವಂತೆ ಭಾಸವಾಗಬಹುದು, ಆದರೆ ಯಾರ ಬಳಿ ಹೋಗಿ ಯಾರನ್ನು ಸಂಪರ್ಕಿಸಿದರೂ ಅವರು ನಮಗೆ ಯಾವುದೇ ಪ್ರತಿಕ್ರಿಯೆ ಕೊಡದಂತೆ ಆಗಬಹುದು. ಒಂದು ವೇಳೆ ಆತ್ಮ ದೇಹದಿಂದ ಬೇರ್ಪಟ್ಟಮೇಲೆ ತನ್ನ ದೇಹಕ್ಕೆ ಸಾವು ಸಂಭವಿಸಿದೆ ಎಂದು ತಿಳಿಯಲೂ ಬಹದು ಆದರೆ ಸಾಯುವ ಮೊದಲು ಹಲವರೊಂದಿಗೆ ಕೆಲವು ಪ್ರಮುಖ ವಿಷಯಗಳನ್ನು ಚರ್ಚಿಸದಂತೆ ಆಯಿತಲ್ಲಾ ಎಂಬ ನೋವು ಉಂಟಾಗಬಹುದು. ಅದನ್ನು ತಿಳಿಯಪಡಿಸಲು ಯಾವುದೇ ದಾರಿ ಇಲ್ಲವಲ್ಲವೆಂಬ ಅತಿ ನೋವು ಉಂಟಾಗಬಹುದು. ಚಡಪಡಿಸಬಹುದು. ಆದರೆ ಇವೆಲ್ಲವೂ ನನ್ನ ಕಾಲ್ಪನಿಕ.
ಒಂದು ವೇಳೆ ವಿಧಿ ವ್ಯಕ್ತಿಯ ಸಾವಿನ ನಂತರ ಆತ್ಮಕ್ಕೆ ಹಿಮ್ಮುಖ ಚಲನೆಯ ಆಯಸ್ಸನ್ನು ನೀಡಲೂ ಬಹುದು ಅಂದರೆ ವ್ಯಕ್ತಿ ಹುಟ್ಟಿದ ಸಮಯದಿಂದ ಆತನ ಆಯಸ್ಸು ಮುಮ್ಮುಖ ಚಲನೆ ಆರಂಭಿಸಿ ಅಂದರೆ 1,2,3 ವರುಷದಂತೆ ಜೀವಿತ ದೇಹದ ಜೀವನ ಅನುಭವಿಸಿ ಕೊನೆಗೆ 80 ವರುಷ ಬದುಕಿ ನಂತರ ಅಸುನೀಗಿದ ಅಂದುಕೊಳ್ಳೋಣ, ಆಗ ಆತ ಅಸುನೀಗಿದ ಸಮಯದಿಂದ ಮತ್ತೆ ಆತ ಆತ್ಮರೂಪದಲ್ಲಿ 80,79,78 ಹೀಗೆ ಆತ್ಮಜೀವನ ಸಾಗಿಸಿ ಕೊನೆಗೆ 1 ವರುಷದ ಆತ್ಮವಾಗಿ, 1 ದಿನದ ಆತ್ಮವಾಗಿ ಕೊನೆಗೆ ಒಂದು ಸಮಯದಲ್ಲಿ ಮತ್ತೆ ಒಂದು ದೇಹಜೀವ ತಳೆಯಬಹುದು ಅನ್ನಿಸುತ್ತದೆ. ಏಕೆಂದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಇಲ್ಲಿ ಹುಟ್ಟಿದ ಮಗುವಿಗೆ ತಾನು ಎಲ್ಲಿಂದ ಬಂದೆ ಮತ್ತು ಈ ಮೊದಲು ನಾನು ಏನಾಗಿದ್ದೆ ಎಂಬ ಬಗ್ಗೆ ಯಾವುದೇ ನೆನಪು ಇರುವುದಿಲ್ಲ ಹಾಗೂ ದೊಡ್ಡವರಾದ ಮೇಲೂ ನೆನಪಾಗುವುದಿಲ್ಲ ಅಲ್ಲವೆ, ಇದಕ್ಕೆ ಕಾರಣ ಆತ್ಮಗಳ ಆಯಸ್ಸಿನ ಹಿಂಮ್ಮುಖ ಚಲನೆ ಕಾರಣವಾಗಿರಬಹುದು, ಏಕೆಂದರೆ ಎಲ್ಲವನ್ನು ಮರೆಸುವ ವಿಧಿಯ ನಿಯಮವಾಗಿರಲೂ ಬಹುದು.
ಇಲ್ಲಿ ಒಂದೊಂದು ವರುಷ ಕಡಮೆಯಾದಂತೆ ಆತ್ಮಕ್ಕೆ ಮರೆವು ಸಂಭವಿಸುತ್ತಿರಬಹುದು ಏಕೆಂದರೆ ಆತ್ಮ ವಯಸ್ಸಿನಲ್ಲಿ ಚಿಕ್ಕದಾಗುತ್ತಾ ಹೋದಂತೆ ಹಾಗೂ ಒಂದು ವರುಷ, ಒಂದು ದಿನದ ಆಯಸ್ಸಿನ ಆತ್ಮವಾಗುತ್ತಿದ್ದಂತೆ ಎಲ್ಲ ಮರೆತಿರುವ ಆತ್ಮ ‘ಪುನರಪಿ ಜನನಂ’ ಎಂಬಂತೆ ಮತ್ತೊಂದು ದೇಹ ಸಿಗಬಹುದು ಅನ್ನಿಸುತ್ತದೆ. ಅಂದರೆ ಇಲ್ಲಿ ವಿಧಿ ದೈಹಿಕ ಮತ್ತು ಆತ್ಮರೂಪ ಈ ಎರಡು ಜೀವನವನ್ನು ಸಮವಾಗಿ ಸಮತೋಲನ ಮಾಡುವಂತೆ ಇದ್ದರೆ, ಆತ್ಮರೂಪದಲ್ಲಿ ಮತ್ತೆ 80 ವರುಷ ಬದುಕಬೇಕಾಗುತ್ತದೆ ಎಂಬಂತೆ ಆಗುತ್ತದೆ. ಒಂದು ವೇಳೆ ಆತ್ಮರೂಪ ಜೀವನದಲ್ಲಿ ಹಿಮ್ಮುಖ ಚಲನೆಯ ಆಯಸ್ಸು ಇಲ್ಲದಿದ್ದರೆ ಏನಾಗುತ್ತಿತ್ತು ಯೋಚಿಸಿ, ಪುನಃ ಬಹುಬೇಗ ಪುನರ್ಜನ್ಮ ಪಡೆಯುವ ಆತ್ಮಕ್ಕೆ ದೇಹ ಮತ್ತು ಮನಸ್ಸು ದೊಡ್ಡದಾದಂತೆ ಒಂದೊಂದೇ ನೆನಪಾಗಬೇಕಿತ್ತು ಆದರೆ ಕಾಕತಾಳಿಯವಂತೆ ಕೆಲವರು ತಮ್ಮ ಪುನರ್ ಜನ್ಮವನ್ನು ನೆನಪು ಮಾಡಿಕೊಂಡು ತಮ್ಮ ಹಿಂದಿನ ಜನುಮದ ವೃತ್ತಾಂವನ್ನೆಲ್ಲಾ ತಿಳಿಸುವ ವಿಚಾರ ನೋಡಿರುತ್ತೇವೆ. ಆದರೆ ಆತ್ಮಜೀವನದ ಬಗ್ಗೆ ಕೆಲವು ಕಥೆಗಳನ್ನು ಕೇಳಿರುತ್ತೇವೆ ಯಮಧರ್ಮ ನಿಮಗೆ ಇನ್ನೂ ಆಯಸ್ಸು ಮುಗಿದಿಲ್ಲ ಹೋಗಿ ಎಂದು ನಮ್ಮನ್ನು ಮತ್ತೆ ತಳ್ಳಿದ ಎಂದು, ಇದನ್ನು ನಂಬುವ ಯಾವುದೇ ಪುರಾವೆ ಮತ್ತು ಖಚಿತತೆ ಇರುವುದಿಲ್ಲ.
ಪರಿಕಲ್ಪನೆ: ವೇಣುಗೋಪಾಲ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC