ಬೀದರ್: ವಿದ್ಯುತ್ ತಂತಿ ತಗುಲಿ ದಂಪತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಭಾನುವಾರ ಜರುಗಿದೆ
ಮಲ್ಲಿಕಾರ್ಜುನ (51) ಹಾಗೂ ಶರಣಮ್ಮ (40) ಮೃತಪಟ್ಟ ರೈತ ದಂಪತಿಯಾಗಿದ್ದಾರೆ. ತಮ್ಮಹೊಲದಲ್ಲಿ ಕೃಷಿ ಕೆಲಸಕ್ಕೆಂದು ತೆರಳುವ ವೇಳೆ ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪರಿಸರ ಮತ್ತು ಅರಣ್ಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ, ಈ ಸುದ್ದಿ ಕೇಳಿ ತುಂಬಾ ದುಃಖವಾಯಿತು. ಮೃತ ದಂಪತಿ ಆತ್ಮಕ್ಕೆ ಶಾಂತಿ ಸಿಗಲಿ, ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಇಂತಹ ದುರ್ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಜೋತು ಬಿದ್ದಿರುವ ಮತ್ತು ಜಾಯಿಂಟ್ ಹಾಕಲಾಗಿರುವ ವಿದ್ಯುತ್ ತಂತಿಗಳ ಪರಿಶೀಲನೆ ಮಾಡಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೃತ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಚೆಸ್ಕಾಂ ಮತ್ತು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್


