ತುಮಕೂರು: ರಾಜ್ಯಾದ್ಯಂತ ಹುಲಿ ಉಗುರಿನ ಪೆಂಡೆಂಟ್ ಪ್ರಕರಣದ ಸದ್ದು ಜೋರಾಗಿರೋ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರಪಕ್ಷಿ ನವಿಲು ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಮಾರನಾಯಕನಪಾಳ್ಯದ ಬಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಬಿಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಬಂಧಿತ ಆರೋಪಿಗಳಾಗಿದ್ದಾರೆ. ಅನೇಕ ದಿನಗಳಿಂದ ನವಿಲುಗಳನ್ನ ಕೊಂದು ಭಕ್ಷಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು 1.5 ಕೆ.ಜಿ. ನವಿಲಿನ ಹಸಿ ಮಾಂಸ, ನವಿಲಿನ ಎರಡು ಕಾಲುಗಳು,ಬೇಯಿಸಿದ ಮಾಂಸ, ನವಿಲು ಹಿಡಿಯಲು ಬಳಸಿದ್ದ ಬಲೆಗಳು, ಉರುಳುಗಳು, ಮಾಂಸ ಬೇಯಿಸಿದ್ದ ಪಾತ್ರೆ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಮಾಂಸವನ್ನ ವಿಧಿ ವಿಜ್ಞಾನ ಪ್ರಯೋಗಾಲಾಯಕ್ಕೆ ಕಳುಹಿಸಿದ್ದು ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ನವಿಲು ಬೇಟೆಯಾಡುವ ಪ್ರಕರಣಗಳು ಕಂಡುಬರುತ್ತಿದ್ದವು. ಕಳೆದ ನಾಲ್ಕು ಐದು ವರ್ಷಗಳಿಂದ ನವಿಲುಗಳ ಸಂತತಿ ಕೂಡ ಜಿಲ್ಲೆಯಾದ್ಯಂತ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ನವಿಲುಪೇಟೆ ಆಡುವುದು ಶಿಕ್ಷಾರ್ಹ ಅಪರಾಧ ಎಂಬ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳಿಗೆ ಬಹುತೇಕ ಕಡಿವಾಣ ಬಿದ್ದಿತ್ತು. ಆದರೂ ಕೂಡ ಕೆಲವಡಿ ಕದ್ದು ಮುಚ್ಚಿ ನವಿಲುಗಳನ್ನು ಬೇಟೆಯಾಡುವುದು ನಡೆದಿದ್ದು ಇದೀಗ ಇಂತಹ ನವಿಲು ಬೇಟೆಗಾರರನ್ನು ಸ್ಥಳೀಯರೇ ಪತ್ತೆ ಹಚ್ಚಿ ಸದ್ದಿಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.
ಇದರಿಂದಾಗಿ ಅದರಲ್ಲೂ ಹುಲಿ ಉಗುರು ಪ್ರಕರಣ ಬೆಳಕಿಗೆ ಬಂದ ನಂತರ ಸ್ಥಳೀಯರು ಇಂತಹ ನವಿಲು ಬೇಟೆಗಾರರ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸುತ್ತಿದ್ದಾರೆ.


