ತುಮಕೂರು: ಜಿಲ್ಲೆಯ ಶಿರಾ ತಾಲೂಕು ಸಾರ್ವಜನಿಕ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ, ಭಾರತೀಯ ಪರಿವರ್ತನ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎಚ್. ಕೆಂಚರಾಯ ಆಸ್ಪತ್ರೆಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿದ ಘಟನೆ ನಡೆದಿದೆ.
ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಕುಳಿತುಕೊಳ್ಳಲು ಆಸನಗಳನ್ನಿಡಲಾಗಿದೆ. ಆದರೆ ಸ್ವಚ್ಛತೆಯ ಬಗ್ಗೆ ಪ್ರಜ್ಞೆ ಇಲ್ಲದ ರೋಗಿಗಳ ಸಹಾಯಕರು ಕಂಡ ಕಂಡಲ್ಲಿ ಊಟದ ಪೇಪರ್ ತಟ್ಟೆ, ಲೋಟ ಹಾಗೂ ಪ್ಲಾಸ್ಟಿಕ್ ಕವರ್ ಗಳನ್ನು ಎಸೆದು, ಆ ಅಶುಚಿತ್ವ ಹೊಂದಿರುವ ಸ್ಥಳದಲ್ಲೇ ಕುಳಿತುಕೊಂಡು ಊಟ ಮಾಡುತ್ತಿರುವುದು ಕಂಡು ಬಂದಿತ್ತು.
ಈ ಸ್ಥಳವನ್ನು ಗಮನಿಸಿದ ಭಾರತೀಯ ಪರಿವರ್ತನ ಸಂಘ ತುಮಕೂರು ಜಿಲ್ಲಾಧ್ಯಕ್ಷ ಎಚ್.ಕೆಂಚರಾಯ, ಆಸ್ಪತ್ರೆಯ ಶುಚಿತ್ವಕ್ಕೆ ಆಗುತ್ತಿರುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ನಗರಸಭಾ ಕಾರ್ಯಾಲಯಕ್ಕೆ ಭೇಟಿ ನೀಡಿ ಅಧ್ಯಕ್ಷರಾದ ಪೂಜಾ ಪೆದ್ದರಾಜು ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ.
ಈ ದೂರಿಗೆ ತಕ್ಷಣವೇ ಸ್ಪಂದಿಸಿದ ಅವರು, ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಇವರ ಕಾರ್ಯಕ್ಕೆ ತುಮಕೂರು ಜಿಲ್ಲಾ ಬಿಪಿಎಸ್ ಅಭಿನಂದನೆ ಸಲ್ಲಿಸಿದೆ.
ಈ ಬಗ್ಗೆ ನಮ್ಮತುಮಕೂರು ಜೊತೆಗೆ ಮಾತನಾಡಿದ ಬಿಪಿಎಸ್ ಜಿಲ್ಲಾಧ್ಯಕ್ಷ ಎಚ್.ಕೆಂಚರಾಯ, ಶಿರಾ ತಾಲೂಕು ಸಾರ್ವಜನಿಕ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕ ನೈರ್ಮಲ್ಯಕ್ಕೆ ಧಕ್ಕೆಯಾಗಿತ್ತು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದು, ಆ ಕಸದ ರಾಶಿಯ ನಡುವೆಯೇ ಕುಳಿತುಕೊಂಡಿದ್ದರು, ತಾಯಿ ಮಕ್ಕಳ ಆಸ್ಪತ್ರೆ ಎಂದರೆ ಸದಾ ನೈರ್ಮಲ್ಯದಿಂದ ಇರಬೇಕು. ಇಲ್ಲವಾದರೆ ಹೊರಗಿನ ಅನೈರ್ಮಲ್ಯದಿಂದ ಒಳಗಿರುವ ಬಾಣಂತಿಯರಿಗೆ ಸೋಂಕು ತಗಲಬಹುದು. ಈ ನಿಟ್ಟಿನಲ್ಲಿ ಈ ಸಮಸ್ಯೆ ಪರಿಹಾರಕ್ಕೆ ನಗರಸಭಾ ಅಧ್ಯಕ್ಷರಾದ ಪೂಜಾ ಪೆದ್ದರಾಜು ಅವರಿಗೆ ಮನವಿ ಮಾಡಿದ್ದೆವು. ಅವರು ತಕ್ಷಣವೇ ಸ್ಪಂದಿಸಿ, ಸ್ವಚ್ಚತೆಗೆ ಕ್ರಮವಹಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡುವ ಅಗತ್ಯವಿದೆ. ಯಾರು ಎಲ್ಲೇ ಕಸ ಎಸೆದರೂ ಕೇಳಲು ಅಲ್ಲಿ ಯಾರೂ ಇಲ್ಲ, ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


