ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ದಂಪತಿಗಳ ನಡುವೆ ಜಗಳ ನಡೆದಿದ್ದು, ಸಿಟ್ಟಿಗೆದ್ದ ಹೆಂಡತಿ ತಾನು ಹೆತ್ತ ಮಗುವನ್ನು ರಾತ್ರೊ ರಾತ್ರಿ ಮೊಸಳೆಗಳಿದ್ದ ನಾಲೆಗೆ ಎಸೆದಿರುವಂತಹ ಘಟನೆ ನಡೆದಿದೆ. ಸಾವಿತ್ರಿ ಆರೋಪಿ ತಾಯಿಯಾಗಿದ್ದಾರೆ. ವಿನೋದ್ (6) ಸಾವಿಗೀಡಾದ ಮಗುವಾಗಿದೆ.
ನಿನ್ನೆ ರಾತ್ರಿ ಗಂಡ ರವಿಕುಮಾರ್ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದ ಸಾವಿತ್ರಿ, ಕೋಪದಲ್ಲಿ ಮಗುವನ್ನ ಮೊಸಳೆಗಳಿದ್ದ ನಾಲೆಗೆ ಎಸೆದು ನಂತರ ಪಶ್ಚಾತಾಪದಿಂದಾಗಿ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಮೃತದೇಹವನ್ನು ಹೊರತೆಗೆಯಲು ಮುಳುಗು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದ್ದು, ಕೊನೆಗೂ ಮಗುವಿನ ಮೃತದೇಹ ಸಿಕ್ಕಿದೆ. ಮಗುವಿನ ಬಲಗೈಯನ್ನು ಮೊಸಳೆ ಕಚ್ಚಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಘಟನೆಯ ಹಿನ್ನಲೆ: ಮೃತ 6 ವರ್ಷದ ವಿನೋದ್ ಮಾತು ಬಾರದ ಮಗು. ಇದನ್ನೇ ನೆಪಮಾಡಿಕೊಂಡಿದ್ದ ಗಂಡ ಕುಡಿದು ಹೆಂಡತಿ ಜತೆ ಜಗಳವಾಡುತ್ತಿದ್ದ. ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಅಂತಾ ಗಂಡ ರವಿಕುಮಾರ್ ಬೈಯ್ಯುತ್ತಿದ್ದ. ಹೀಗಾಗಿ ಗಂಡನ ಜತೆ ಗಲಾಟೆಯ ಕೋಪದಲ್ಲಿ ಮಗುವನ್ನು ಎತ್ತಿಕೊಂಡು ಹೋದ ತಾಯಿ ಸಾವಿತ್ರಿ ನಾಲೆಗೆ ಎಸೆದಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಕಾರ್ಯಾಚರಣೆ ವೇಳೆ ಮಗುವಿನ ಜತೆ ಮೊಸಳೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ದಾಂಡೇಲಿಯ ಗ್ರಾಮೀಣ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಮಗುವಿನ ಮೃತದೇಹ ಪತ್ತೆ ಮಾಡಲಾಗಿದ್ದು, ಮೊಸಳೆಯ ಬಾಯಿಯಿಂದ ಮಗುವಿನ ಮೃತದೇಹವನ್ನು ಮುಳುಗು ತಜ್ಞರು ಬಿಡಿಸಿಕೊಂಡು ಬಂದಿದ್ದಾರೆ.
ಸದ್ಯ ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296