ಬೆಂಗಳೂರು: ನಮ್ಮ ಸರಕಾರದ ಆಡಳಿತಾವಧಿಯಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಎಲ್ಲ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ. ಅವರ ಎಲ್ಲ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮುಡಾದಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ ನಡೆಸಿದ ಕುರಿತು ಬುಧವಾರ ಚನ್ನಪಟ್ಟಣದಲ್ಲಿ ಅವರು ಸುದ್ದಿಗಾರರಿಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಬೇಬಿ ಬೆಟ್ಟದಲ್ಲಿ ಪ್ರಯೋಗಾತ್ಮಕ ಸ್ಫೋಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಆರ್ ಎಸ್ ಅಣೆಕಟ್ಟಿನಲ್ಲಿ ಸ್ಫೋಟ ಮಾಡುವುದಿಲ್ಲ. ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಸ್ಫೋಟ ಮಾಡಲಾಗುತ್ತದೆ. ಅಣೆಕಟ್ಟೆಗಿಂತ ಇಂತಿಷ್ಟು ದೂರ ಎಂಬುದು ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದಾರೆ. ನಿಮನ್ನು ನೋಡಿ ನಕಲು ಮಾಡುತ್ತಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನ ಸಂಪರ್ಕ ಮಾಡಲಿ, ಒಳ್ಳೆಯ ಕೆಲಸ ಯಾರು ಮಾಡಿದರೆ ಏನಂತೆ. ಜನಸೇವೆ ಮಾಡುವುದನ್ನು ನಾನು ಬೇಡ ಎಂದು ಹೇಳಲು ಆಗುತ್ತದೆಯೇ? ಎಂದರು.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಯಾವಾಗ ಘೋಷಣೆ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಮೊದಲು ಚುನಾವಣಾ ದಿನಾಂಕ ಘೋಷಣೆಯಾಗಲಿ. ನಂತರ ಅವರೇ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


