ಬೆಂಗಳೂರು: ‘ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಅದನ್ನು ಮುಚ್ಚಿಹಾಕಿ. ಬಹು ಸಂಖ್ಯಾತರ ಮೇಲೆ ಆರೋಪ ಬಂದರೆ ಕೂಡಲೇ ಕ್ರಮ ಕೈಗೊಳ್ಳಿ ಎಂಬುದಾಗಿ ಪೊಲೀಸ್ ಇಲಾಖೆಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನವಿದೆ’ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದ ಪ್ರಜೆಯಾಗಿ ಇದೆಲ್ಲಾ ನಮ್ಮ ಮನಸ್ಸಿಗೆ ಬೇಸರ ತರಿಸಿದೆ. ಹಾಗಿದ್ದರೆ, ಈಗ ಕೇಳಿಬಂದಿರುವ ಎರಡೂ ಆರೋಪಗಳು ಸಾಬೀತಾದರೆ ಸರ್ಕಾರ ವಿಸರ್ಜನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಎರಡೂ ಕಡೆ ನಡೆದಿರುವುದು ಭಯೋತ್ಪಾದನಾ ಘಟನೆ ಆದರೆ ಸರ್ಕಾರದ ಎಲ್ಲರೂ ರಾಜೀನಾಮೆ ಕೊಡುತ್ತಾರಾ? ಉದ್ಯಮ ಸಂಘರ್ಷದಿಂದ ದಾಳಿ ಎಂದು ಹೇಳಿದ್ದು ಯಾರು? ಹೀಗೆ ಹೇಳಿದರೆ ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮುಂದುವರಿಸುತ್ತಾರೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಅಶೋಕ್ ಆಗ್ರಹಿಸಿದರು.
ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿ ಸರ್ಕಾರ ಏನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಮುಸ್ಲಿಂ ಭಯೋತ್ಪಾದಕರು ಮಾಡಿದ್ದಾರೆಂದು ಗೊತ್ತಾದರೆ ಸರ್ಕಾರಕ್ಕೆ ಹಿನ್ನಡೆ ಆಗುತ್ತದೆ ಎಂದು ಮುಚ್ಚಿಡುವ ಯತ್ನ ಮಾಡಲಾಗುತ್ತಿದೆ. ಎಷ್ಟು ದಿನ ಆಗುತ್ತೋ ಅಷ್ಟು ದಿನ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.
ಖಾಸಗಿ ರಿಪೋರ್ಟ್ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೃಢವಾಗಿದೆ. ಸರ್ಕಾರಕ್ಕೆ ಕೂಡ ಈಗಾಗಲೇ ಎಫ್ಎಸ್ಎಲ್ ವರದಿ ಬಂದಿದೆ. ಯಾರನ್ನೋ ಕಾಪಾಡಲು ರಾಜ್ಯ ಸರ್ಕಾರ ಮುಚ್ಚಿಡುವ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಆ ರೀತಿ ಘಟನೆ ನಡೆದೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಪಾದಿಸಿದ್ದಾರೆ. ಬಾಂಬ್ ಸ್ಫೋಟ ವ್ಯಾವಹಾರಿಕ ಸಂಘರ್ಷ ಎಂದು ಹೇಳಿದ್ದಾರೆ. ಮಂಗಳೂರು ಬಾಂಬ್ ಸ್ಫೋಟದ ಸಂಚುಕೋರನನ್ನು ಅಮಾಯಕ ಎಂದಿದ್ದರು. ಇನ್ನೂ ಐದು ದಿನವಾದರೂ ಎಫ್ಎಸ್ಎಲ್ ವರದಿ ಕೊಡುವುದಿಲ್ಲ. ಯಾರ ಮೇಲೆಯೋ ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


