ವರದಿ: ನಂದೀಶ್ ನಾಯ್ಕ ಪಿ.
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಹೋಬಳಿಯ ಬಿ.ಹೊಸಹಳ್ಳಿ ಗ್ರಾಮದ ಬೆಟ್ಟಗುಡ್ಡಗಳ ನಡುವೆ ನೆಲೆ ನಿಂತಿರುವ ವನನಂದೀಶ್ವರ ದೇವರ ತಾಣ ಒಂದು ಮನೋಹರ ಕ್ಷೇತ್ರವಾಗಿದೆ.
ಸುತ್ತಲೂ ಬೆಟ್ಟಗುಡ್ಡಗಳು, ಮಧ್ಯೆ ತಗ್ಗು ಪ್ರದೇಶ, ಎಲ್ಲವನ್ನೂ ಆವರಿಸಿರುವ ನೀಲಗಿರಿ ನೆಡುತೋಪು, ಪಕ್ಕದಲ್ಲೇ ಕಟ್ಟಿರುವ ಕೆರೆ, ಬೆಟ್ಟಗುಡ್ಡಗಳ ನಡುವೆ ಎದ್ದು ಕಾಣುವ ಹಸಿರು ವನರಾಶಿ, ಈ ಸುಂದರ ಪರಿಸರದ ನಡುವೆ ಸುತ್ತಲೂ ಬಿಲ್ವಪತ್ರೆ ಮರಗಳಿಂದ ಆವೃತವಾದ ಪ್ರಶಾಂತ ವಾತಾವರಣದಲ್ಲಿ ನೆಲೆ ನಿಂತಿರುವ ವನನಂದಿ ಎಲ್ಲರ ಮನಸ್ಸನ್ನು ಸೂಚಿಗಲ್ಲಿನಂತೆ ಮೊದಲ ನೋಟದಲ್ಲೇ ಹಿಡಿದಿಡುತ್ತದೆ.
ತಾಲ್ಲೂಕು ಕೇಂದ್ರದಿಂದ ಮರಿದಾಸನಹಳ್ಳಿ ಹಳ್ಳಿಗೆ ಬಂದು ವನಂತರವನ್ನು ಸೇರಬಹುದು ಅಥವಾ ಹೋಬಳಿ ಕೇಂದ್ರವಾದ ವೈ.ಎನ್.ಹೊಸಕೋಟೆ ಬಂದು ಬಿ.ಹೊಸಹಳ್ಳಿಯ ಮೂಲಕ ಸೇರಬಹುದಾಗಿದೆ. ವನಂತರ ಸ್ಥಳವು ಮರಿದಾಸನಹಳ್ಳಿ ಮತ್ತು ಬಿ.ಹೊಸಹಳ್ಳಿ ಮಾರ್ಗಮಧ್ಯೆ ಪಶ್ಚಿಮದಲ್ಲಿ ಇರುವ ಬೆಟ್ಟಗಳ ಸಾಲಿನಲ್ಲಿ ಮುಖ್ಯ ರಸ್ತೆಯಿಂದ ಸುಮಾರು ಕಾಲಳತೆಯ ದೂರದಲ್ಲಿದೆ.
ಬಿಲ್ವಪತ್ರೆ ವನದಲ್ಲಿರುವ ವನಂತರ ವನನಂದಿಗೆ ಹರಕೆ ಹೊತ್ತು ಸೋಮವಾರದ ರಾತ್ರಿ ಪೂಜೆ ಸಲ್ಲಿಸಿ ರಾತ್ರಿ ಪೂರಾ ಶಿವಾರಾಧನೆ ಮಾಡಿದರೆ ಖಂಡಿತವಾಗಿ ಮಳೆಯು ಬಂದೇ ಬರುತ್ತದೆ ಎಂಬುದು ಭಾಗದ ಜನಸಾಮಾನ್ಯರ ಮತ್ತು ರೈತರ ನಂಬಿಕೆ.
ದೇವಾಲಯದಿಂದ ಅನತಿ ದೂರದಲ್ಲಿರುವ ಎಂದೂ ಬತ್ತದ ತಲಪೆರಿಕಿ/ ಕಲ್ಯಾಣಿಯಲ್ಲಿ ಮಿಂದು ಬಿಲ್ವಪತ್ರೆ ಮತ್ತು ಬಸವನ ಪಾದ ಪುಷ್ಪಗಳಿಂದ ಇಲ್ಲಿನ ನಂದಿಶ್ವರನಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿ ಶಿವಾರಾಧನೆ ಮಾಡಿದರೆ ಭಕ್ತರ ಕೋರಿಕೆಗಳು ನೆರವೇರುತ್ತವೆ ಎಂಬುದು ಇಲ್ಲಿನ ಪ್ರತೀತಿ. ತಮ್ಮ ಕೋರಿಕೆಗಳು ನೆರವೇರಿದರೆ ಈ ಸ್ಥಳದಲ್ಲಿ ಭಕ್ತಾದಿಗಳು ಹರಕೆಯ ರೂಪದಲ್ಲಿ ಅನ್ನದಾಸೋಹ ನಡೆಸುತ್ತಾರೆ. ಜೊತೆಗೆ ಭಕ್ತಾದಿಗಳು ಪ್ರತಿ ಸೋಮವಾರದಂದು ಹಾಗೂ ವಿಶೇಷವಾಗಿ ಶ್ರಾವಣಮಾಸದಲ್ಲಿ ವಿಶಿಷ್ಟ ಪೂಜೆಗಳನ್ನು ಹಮ್ಮಿಕೊಳ್ಳುತ್ತಾರೆ.
ಇಂತಹ ವಿಶೇಷ ಮಹಿಮೆಯೊಂದಿಗೆ ಪ್ರಾಕೃತಿಕ ಶಕ್ತಿ ಹೊಂದಿರುವ ಈ ಸ್ಥಳವನ್ನು ಸ್ಥಳೀಯ ರೈತರು ಮತ್ತು ಭಕ್ತವೃಂದ ಸೇರಿಕೊಂಡು ಇತ್ತೀಚೆಗೆ ‘ವನಂತರ ನಂದೀಶ್ವರ ಶಿವ ದೇವಾಲಯ ಸೇವಾ ಟ್ರಸ್ಟನ್ನು ಮಾಡಿಕೊಂಡು ತಮ್ಮ ಸ್ವಂತ ಹಣದ ಜೊತೆಗೆ ಭಕ್ತಾಧಿಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ನೀರಿನ ಸೌಲಭ್ಯ, ರಾತ್ರಿ ಉಳಿದುಕೊಳ್ಳಲು ಒಂದು ಕೊಠಡಿ, ಶುಭಕಾರ್ಯಗಳಿಗೆ ಅನುಕೂಲವಾಗುವಂತೆ ತೆರೆದ ಬೋಜನಾಲಯ, ಸುಂದರ ಉದ್ಯಾನವನ ನಿರ್ಮಾಣಗೊಂಡಿವೆ. ಮಕ್ಕಳು ಆಟವಾಡುವ ಸಲುವಾಗಿ ತಿರುಗಣಿ ಇತ್ಯಾದಿಗಳನ್ನು ನಿರ್ಮಿಸಲಾಗಿದೆ.
ಈಶ್ವರ ದೇವಾಲಯ ಅಲ್ಪಮಟ್ಟಿನ ಜೀರ್ಣೋದ್ದಾರ ಕಂಡಿದೆ. ದೇವಾಲಯದಲ್ಲಿ ಪಾರ್ವತಿ, ಗಣಪತಿ ಹಾಗೂ ನಾಗರ ಕಲ್ಲುಗಳ ಪ್ರತಿಷ್ಟಾಪನೆ ಮಾಡಲಾಗಿದೆ. ಬಿಲ್ವ ವನದಲ್ಲಿ ವಿವಿಧ ಪವಿತ್ರ ಮರಗಳನ್ನು ನೆಡುತ್ತಿದ್ದಾರೆ. ಬಂದುಹೋಗುವ ಭಕ್ತಾದಿಗಳಿಗೆ ಗುಡ್ಡ ಪ್ರದೇಶದಲ್ಲಿ ಸೂಕ್ತವಾಗಿ ವಾಹನಗಳು ಹೋಗಲು ರಸ್ತೆಯನ್ನು ಮಾಡಲಾಗಿದೆ.
ವನಂತರ ನಂದಿಯ ಪ್ರತಿಷ್ಟಾಪನೆ ಮತ್ತು ಆರಾಧನೆ ಬಹಳಷ್ಟು ಇತಿಹಾಸವಿದ್ದು, ಅವಲೋಕಿಸಿ ಹೊರತೆಗೆಯುವ ಕಾರ್ಯ ನಡೆಯಬೇಕಿದೆ. ಇಲ್ಲಿನ ಇತಿಹಾಸ ಕಾಲಗರ್ಭದಲ್ಲಿ ಹುದುಗಿದ್ದರೂ ಸ್ಥಳ ಮಹಿಮೆ ಮಾತ್ರ ಅಪಾರವಾಗಿದೆ. ವಿಶೇಷವಾಗಿ ಇದೊಂದು ಸುಂದರವಾದ ರಮ್ಯವಾದ ಧಾರ್ಮಿಕ ಸ್ಥಳದ ಜೊತೆಗೆ ಚಾರಣಪ್ರಿಯರಿಗೆ ಮತ್ತು ಪ್ರಕೃತಿ ಆರಾಧಕರಿಗೆ ಸೂಕ್ತವಾದ ಪ್ರದೇಶ ಎನ್ನಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4