ಬೇಸಗೆಯ ಧಗೆಗೆ ಅನೇಕರು ಕಲ್ಲಂಗಡಿ ಹಣ್ಣಿನ ಮೊರೆಹೋಗುತ್ತಿದ್ದಾರೆ. ಕೆಜಿ ಗಟ್ಟಲೆ ಕೊಂಡು ಮನೆಗೆ ತರುತ್ತಾರೆ. ಅಂತೆಯೇ ಹೀಗೆ ಕೊಂಡುಕೊಂಡು ಬಂದು ಮನೆಯ ಅಡುಗೆ ಕೋಣೆಯಲ್ಲಿಟ್ಟ ಕಲ್ಲಂಗಡಿ ಹಣ್ಣೊಂದು ಸ್ಫೋಟವಾಗಿ ಅಕ್ಕಪಕ್ಕದವರು ಬೆಚ್ಚಿಬಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.
ಕೇರಳದ ಪೊನ್ನನಿಯ ನಸ್ರುದ್ದೀನ್ ಎಂಬುವರ ಮನೆಯ ಅಡುಗೆ ಕೋಣೆಯಲ್ಲಿ ಸೋಮವಾರ ಬೆಳಗ್ಗೆ ಇಂತಹ ಒಂದು ವಿಚಿತ್ರ ಘಟನೆ ನಡೆದಿದೆ. ಅಂಗಡಿಯಿಂದ ಖರೀದಿಸಿ ಮನೆಗೆ ತಂದ ಕಲ್ಲಂಗಡಿ ಹಣ್ಣು ಸ್ಫೋಟಿಸಿದೆ. ಅಂದಹಾಗೆ ಹತ್ತಿರದ ಎಂಇಎಸ್ ಕಾಲೇಜಿನಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ತರಲಾಗಿತ್ತು. ಅಡುಗೆ ಮನೆಯಲ್ಲಿ ಸ್ಫೋಟಗೊಂಡ ಶಬ್ಧ ಕೇಳಿ ಬೆಚ್ಚಿಬಿದ್ದ ಅಕ್ಕಪಕ್ಕದ ಮನೆಯವರು ಓಡಿ ಬಂದು ನೋಡಲು, ನೆಲದ ಮೇಲೆ ಅಲ್ಲಲ್ಲಿ ಕೊಳಕು ವಾಸನೆಯೊಂದಿಗೆ ಕಲ್ಲಂಗಡಿ ಹಣ್ಣು ಚಿಧ್ರವಾಗಿ ಬಿದ್ದಿತ್ತು.
ಮಾಹಿತಿ ತಿಳಿದು ಆರೋಗ್ಯ ಇಲಾಖೆ ಮತ್ತು ಮುನ್ಸಿಪಾಲಿಟಿಯ ಆಹಾರ ಸುರಕ್ಷತಾ ಅಧಿಕಾರಿಗಳು ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಹಣ್ಣನ್ನು ಖರೀದಿ ಮಾಡಿದ ಅಂಗಡಿಗೆ ತೆರಳಿ ಹಣ್ಣಿನ ಸ್ಯಾಂಪಲ್ ಪಡೆದು ಪರೀಕ್ಷೆಗೆಂದು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಳಿಕ ಸ್ಫೋಟಕ್ಕೆ ಏನು ಕಾರಣ ಎಂಬ ಮಾಹಿತಿ ತಿಳಿಯಬೇಕಿದೆ.
ಇದಾದ ಬಳಿಕ ಕಲ್ಲಂಗಡಿ ಹಣ್ಣು ಯಾಕೆ ಸ್ಫೋಟಿಸುತ್ತದೆ ಎಂಬ ಪ್ರಶ್ನೆಗೆ ನ್ಯೂಯಾರ್ಕ್‌ನ ನ್ಯೂಟ್ರಿಷನ್ ಗ್ರೂಪ್ ನ ಸಿಇಒ ಲಿಸಾ ಮಾಸ್ಕೋಯಿಟ್ಸ್ ಇನ್ ಸೈಡ್ ಎಡಿಸನ್ ಎಂಬ ಮಾಧ್ಯಮಕ್ಕೆ ವಿವರಿಸಿದ್ದಾರೆ. ತೀವ್ರವಾದ ಶಾಖವು ಕಲ್ಲಂಗಡಿ ಹಣ್ಣುಗಳ ಒಳಗೆ ಬ್ಯಾಕ್ಟಿರಿಯಾ ಬೆಳೆಯಲು ಕಾರಣವಾಗುತ್ತದೆ. ಇದರಿಂದಾಗಿ ಹಣ್ಣು ಸ್ಪೋಟಿಸುತ್ತದೆ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


