ಔರಾದ: ಇಲ್ಲಿನ ಹಂದಿಖೇರಾ ಗ್ರಾಮದಲ್ಲಿ ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಗಳೇ ಚರಂಡಿಯಂತಾಗಿವೆ. ಇದರಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
ಚಿಮ್ಮೆಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಸುಮಾರು 300 ಮನೆಗಳಿವೆ. ಆದರೆ ಸೂಕ್ತ ಚರಂಡಿ ಇಲ್ಲದಿರುವುದರಿಂದ ಹೊಲಸು ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ಎಲ್ಲೆಡೆ ದುರ್ವಾಸನೆ ಬೀರುತ್ತಿದೆ.
ಕೊಳಚೆ ನೀರಿನ ಮೇಲೆಯೇ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ಓಡಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ.
ಗ್ರಾಮದ ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ದೂರಿದಾರೆ.
ಈಗಾಗಲೇ ಹಲವು ಬಾರಿ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಲಾಗಿದೆ. ಆದರೂ ಕೂಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ, ಬದಲಾಗಿ ಎರಡು ಮೂರು ದಿನಗಳಲ್ಲಿ ಬಂದು ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಸ್ಥಳಕ್ಕೆ ಬರುವುದೇ ಇಲ್ಲ ಎಂದು ಗ್ರಾಮಸ್ಥ ಅಮೂಲ ಬೀರಾದರ ಅಸಮಾಧಾನ ವ್ಯಕ್ತಪಡಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


