ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಕನ್ನಡದ ವಿಚಾರದಲ್ಲಿ ರಾಜಿಯಾಗದೆ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧ ಆವರಣದಲ್ಲಿ ನಡೆದ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ವಿಧಾನಸೌಧದ ಆವರಣದಲ್ಲಿ ಅಂಬೇಡ್ಕರ್ ಅವರ, ಬಸವಣ್ಣನವರ, ಕೆಂಪೇಗೌಡರು ಸೇರಿದಂತೆ ಅನೇಕ ನಾಯಕರ ಪ್ರತಿಮೆಗಳಿವೆ. ಈ ಶಕ್ತಿ ಕೇಂದ್ರದಲ್ಲಿ ನಾಡ ದೇವಿ ಭುವನೇಶ್ವರಿ ತಾಯಿ ಪ್ರತಿಮೆ ಇರಬೇಕು. ಇಲ್ಲಿಗೆ ಭೇಟಿ ನೀಡುವವರು ದೇವಿಯ ಆಶೀರ್ವಾದ ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ. ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾಗಿದ್ದು, ಈ ನೆನಪಿಗಾಗಿ 25 ಅಡಿಯ ಕಂಚಿನ ಪ್ರತಿಮೆ ಸ್ಥಾಪಿಸಲಾಗುತ್ತಿದೆ” ಎಂದರು.
“ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯ ಮಾಡಿ ಮೊದಲ ಬಾರಿಗೆ ಕಾನೂನು ಮಾಡಲಾಯಿತು. ಇದಕ್ಕೆ ಅನೇಕ ಕನ್ನಡ ಸಂಘಟನೆಗಳು ಹೋರಾಟ ಮಾಡಿವೆ. ಒಂದಷ್ಟು ಬಾರಿ ಕಾನೂನು ಕೈಗೆ ತೆಗೆದುಕೊಂಡಾಗ ರಾಜಿಯಾಗದೆ ಕೆಲಸ ಮಾಡಿದ್ದೇವೆ. ಜೊತೆಗೆ ಕನ್ನಡ ಉಳಿಸುವ ಕೆಲಸವನ್ನು ಮಾಡಿದ್ದೇವೆ” ಎಂದು ಹೇಳಿದರು.
ನಾವು ಯಾರು ಶಾಶ್ವತವಲ್ಲ ಆದರೆ ನಾವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಉತ್ತಮವಾದ ಆಲೋಚನೆ ಮಾಡಿರುವ ಕನ್ನಡ ಸಂಸ್ಕೃತಿ ಇಲಾಖೆಗೆ ಅಭಿನಂದನೆಗಳು. ಕನ್ನಡ ಬೆಳೆಯಲಿ, ಉಳಿಯಲಿ” ಎಂದು ಆಶಿಸಿದರು.
ದೇಶದ ಮಕ್ಕಳ ಭವಿಷ್ಯ ಮುಖ್ಯ :
ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ನೀಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು “ನೀಟ್ ಪರೀಕ್ಷೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ಅಕ್ರಮ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ ಎನ್ ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಗೆ ನೋಟಿಸ್ ನೀಡಿರುವುದು ಉತ್ತಮ ನಡೆ. ನಮ್ಮ ದೇಶದ ಮಕ್ಕಳ ಭವಿಷ್ಯ ಮುಖ್ಯವಾದುದು” ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


