ತುರುವೇಕೆರೆ: ತಾಲೂಕಿನ ಎಲ್ಲಾ ಜನಾಂಗಗಳ ಮುಖಂಡರುಗಳು ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ತಾಲೂಕು ಕೇಂದ್ರದಲ್ಲಿ ಸಂವಿಧಾನ ಶಿಲ್ಪಿಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಒಮ್ಮತದ ತೀರ್ಮಾನ ಕೈಗೊಂಡರು.
ರಾಜ್ಯದ ವಿವಿಧ ತಾಲೂಕು ಕೇಂದ್ರಗಳಲ್ಲಿ ಇರುವಂತೆ ತುರುವೇಕೆರೆ ತಾಲೂಕು ಕೇಂದ್ರ ಭಾಗದಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಸ್ಥಾಪನೆಗೆ ಹಾಗೂ ಅದಕ್ಕೆ ಸೂಕ್ತ ಸ್ಥಳ ಗುರುತಿಸಲು ಸಭೆ ಕರೆಯಲಾಗಿತ್ತು. ಭೀಮೋತ್ಸವ ಆಚರಣಾ ಸಮಿತಿಯ ನೆಮ್ಮದಿ ಗ್ರಾಮದ ಸಿ.ಎಸ್.ಮೂರ್ತಿರವರ ಸಮ್ಮಖದಲ್ಲಿ ನಡೆದ ಸಭೆಯಲ್ಲಿ ಹಲವಾರು ಸಮಾಜದ ಮುಖಂಡರು, ಹೋರಾಟಗಾರರು, ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪುತ್ಥಳಿ ಸ್ಥಾಪನೆಗೆ ಸಮಿತಿ ರಚನೆ:
ಬಾಬಾ ಸಾಹೇಬರು ಕೇವಲ ಒಂದು ಜಾತಿಗೆ ಸೀಮಿತವಾಗಿದ್ದವರಲ್ಲ. ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ನಾವು ಜೀವಿಸುವ ಹಕ್ಕನ್ನು ಪಡೆದಿದ್ದೇವೆ. ಅವರ ಪುತ್ಥಳಿ ಸ್ಥಾಪನೆಯಂತಹ ಮಹತ್ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಲು ಮತ್ತು ಇಂತಹ ಕಾರ್ಯಕ್ಕೆ ರಾಜಕೀಯ ಮುಖಂಡರುಗಳ ಸಹಕಾರ ಪಡೆದುಕೊಳ್ಳಲು ಪಕ್ಷ ಭೇದ ಮರೆತು ಒಮ್ಮತದ ತೀರ್ಮಾನ ಕೈಗೊಂಡರು. ಸಮಿತಿ ಅಧ್ಯಕ್ಷರನ್ನಾಗಿ ವಕೀಲರು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರೂ ಆದ ಪಿ.ಎಚ್.ಧನಪಾಲ್ ಹಾಗೂ ಕಾರ್ಯದರ್ಶಿಯಾಗಿ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ. ಕುಮಾರಸ್ವಾಮಿ ಆಯ್ಕೆಯಾದರು. ಉಳಿದ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


